image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಮಗ್ರ ಆರೋಗ್ಯ ರಕ್ಷಣೆಗಾಗಿ ಫಾದರ್ ಮುಲ್ಲರ್ ಸಂಸ್ಥೆ ಹಾಗೂ ಆವಿಷ್ಕಾರ್ ಯೋಗ ಕೇಂದ್ರದ ನಡುವೆ ಮಹತ್ವದ ಒಪ್ಪಂದ

ಸಮಗ್ರ ಆರೋಗ್ಯ ರಕ್ಷಣೆಗಾಗಿ ಫಾದರ್ ಮುಲ್ಲರ್ ಸಂಸ್ಥೆ ಹಾಗೂ ಆವಿಷ್ಕಾರ್ ಯೋಗ ಕೇಂದ್ರದ ನಡುವೆ ಮಹತ್ವದ ಒಪ್ಪಂದ

ಮಂಗಳೂರು: ಸಮಗ್ರ ಆರೋಗ್ಯ ರಕ್ಷಣೆ, ಸ್ವಾಸ್ಥ್ಯ, ಸಂಶೋಧನೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ (FMCI) ಮತ್ತು ಆವಿಷ್ಕಾರ್ ಯೋಗ ಹಾಗೂ ಹೋಲಿಸ್ಟಿಕ್ ಹೆಲ್ತ್ ಸೆಂಟರ್ ಜಂಟಿಯಾಗಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಸಂಸ್ಥೆಯ ಧ್ಯೇಯವಾಕ್ಯವಾದ "ಗುಣಪಡಿಸುವುದು ಮತ್ತು ಸಾಂತ್ವನ ನೀಡುವುದು" ಎಂಬುದನ್ನು ಇನ್ನಷ್ಟು ಪ್ರಗತಿಪರ ಹಾಗೂ ಸಮಗ್ರ ರೂಪದಲ್ಲಿ ಅನುಷ್ಠಾನಗೊಳಿಸಲು ಈ ಪಾಲುದಾರಿಕೆ ಸಹಕಾರಿಯಾಗಲಿದೆ.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲ್ಯೂಕಾಸ್ ಲೋಬೋ ಮತ್ತು ಆವಿಷ್ಕಾರ್ ಯೋಗ ಕೇಂದ್ರದ ನಿರ್ದೇಶಕರಾದ ಕುಶಾಲಪ್ಪ ಗೌಡ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಹಾಗೂ ಆವಿಷ್ಕಾರ್ ಯೋಗ ಟ್ರಸ್ಟ್‌ನ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಈ ಒಪ್ಪಂದದ ಮೂಲಕ ಪರಸ್ಪರ ಜ್ಞಾನ, ಪರಿಣತಿ ಮತ್ತು ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಂಡು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಆರೋಗ್ಯ ವೃತ್ತಿಪರರಿಗೆ ಅನುಕೂಲವಾಗುವಂತಹ ನಾವೀನ್ಯತೆಯುಳ್ಳ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆವಿಷ್ಕಾರ್ ಯೋಗ ಕೇಂದ್ರದ ನಿರ್ದೇಶಕ ಕುಶಾಲಪ್ಪ ಗೌಡ ಅವರು, ಪ್ರತಿಷ್ಠಿತ ಫಾದರ್ ಮುಲ್ಲರ್ ಸಂಸ್ಥೆಯೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸುಮಾರು 27 ವರ್ಷಗಳ ಹಿಂದೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತಮಗಾದ ವೈಯಕ್ತಿಕ ಅನುಭವವನ್ನು ನೆನಪಿಸಿಕೊಂಡ ಅವರು, ಅಲ್ಲಿನ ವೈದ್ಯರು ಹಾಗೂ ದಾದಿಯರ ಕಾಳಜಿ ಮತ್ತು ಆಸ್ಪತ್ರೆಯ ಪೂರಕ ವಾತಾವರಣವು ಚಿಕಿತ್ಸೆಗೂ ಮುನ್ನವೇ ರೋಗಿಗಳಲ್ಲಿ ಧೈರ್ಯ ತುಂಬುತ್ತಿತ್ತು ಎಂದರು. ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಸದ್ಯ ಸಿಒಪಿಡಿ (COPD) ರೋಗಿಗಳಲ್ಲಿ ಯೋಗದ ಪ್ರಭಾವದ ಕುರಿತು ಪಿಎಚ್.ಡಿ ಸಂಶೋಧನೆ ನಡೆಸುತ್ತಿರುವ ಅವರು, ಇಂದು ಯುವ ಪೀಳಿಗೆ ಹಾಗೂ ವೈದ್ಯಕೀಯ ರಂಗದವರು ಯೋಗದ ಕಡೆಗೆ ತೋರುತ್ತಿರುವ ಆಸಕ್ತಿ ಶ್ಲಾಘನೀಯ ಎಂದರು. ದೀರ್ಘಾವಧಿಯ ಯೋಗ ತರಗತಿ ನಡೆಸಿ ಗಿನ್ನೆಸ್ ವಿಶ್ವ ದಾಖಲೆ ಬರೆದಿರುವ ಕುಶಾಲಪ್ಪ ಗೌಡ ಅವರು, ಈ ಒಪ್ಪಂದವು ಭವಿಷ್ಯದಲ್ಲಿ ಉತ್ತಮ ಯೋಗ ಸಂಶೋಧನಾ ಸಾಹಿತ್ಯ ಸೃಷ್ಟಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲ್ಯೂಕಾಸ್ ಲೋಬೋ ಅವರು ಕನ್ನಡದಲ್ಲೇ ಆಕರ್ಷಕವಾಗಿ ಮಾತನಾಡುತ್ತಾ, ಯೋಗವನ್ನು "ಸುಯೋಗ" (ಆರೋಗ್ಯದ ಉತ್ತಮ ಅವಕಾಶ) ಎಂದು ಬಣ್ಣಿಸಿದರು. "ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ತಡೆಯುವುದು ಲೇಸು" ಎಂಬ ತತ್ವಕ್ಕೆ ಯೋಗವು ಅತ್ಯುತ್ತಮ ಪೂರಕ ಮಾರ್ಗವಾಗಿದೆ ಎಂದು ಅವರು ತಿಳಿಸಿದರು. ಈ ಒಪ್ಪಂದವು ಕೇವಲ ಸಾಂಪ್ರದಾಯಿಕ ಒಪ್ಪಂದವಾಗಿರದೆ, ಪರಸ್ಪರ ಕಲಿಕೆ ಮತ್ತು ಬೆಳವಣಿಗೆಯ ಜೀವಂತ ಬದ್ಧತೆಯಾಗಿದೆ. ಪ್ರಕೃತಿಯು ನೀಡಿರುವ ಅಮೂಲ್ಯ ಕೊಡುಗೆಯಾದ ಯೋಗವನ್ನು ಫಾದರ್ ಮುಲ್ಲರ್ ಕ್ಯಾಂಪಸ್‌ನ ವಿದ್ಯಾರ್ಥಿಗಳು, ವೈದ್ಯರು ಮತ್ತು ಸಿಬ್ಬಂದಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದೈಹಿಕ ಹಾಗೂ ಮಾನಸಿಕ ಚೇತರಿಕೆ ಪಡೆಯಲು ಇದು ಸಹಕಾರಿಯಾಗಲಿದೆ ಎಂದರು.

ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಫಾದರ್ ಮುಲ್ಲರ್ ಸಂಸ್ಥೆಯು ಹೋಮಿಯೋಪತಿ, ಅಲೋಪತಿ, ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್ ಸೇರಿದಂತೆ ವಿವಿಧ ವೈದ್ಯಕೀಯ ರಂಗಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಪ್ರಸ್ತುತ ಆವಿಷ್ಕಾರ್ ಯೋಗ ಕೇಂದ್ರದೊಂದಿಗಿನ ಈ ಒಪ್ಪಂದವು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಯೋಗ ಪದ್ಧತಿಯನ್ನು ಸಂಯೋಜಿಸುವ ಮೂಲಕ ರೋಗಿಗಳ ಪುನರ್ವಸತಿ, ಒತ್ತಡ ನಿರ್ವಹಣೆ ಹಾಗೂ ಜೀವನಶೈಲಿಯ ಸುಧಾರಣೆಗೆ ಹೊಸ ದಾರಿದೀಪವಾಗಲಿದೆ.

ಈ ಮಹತ್ವದ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಡ್ಮಿನಿಸ್ಟ್ರೇಟರ್ ವಂ. ಫಾ. ಜಾರ್ಜ್ ಜೀವನ್ ಸಿಕ್ವೇರಾ, ಹೋಮಿಯೋಪತಿ ಆಸ್ಪತ್ರೆಯ ಅಡ್ಮಿನಿಸ್ಟ್ರೇಟರ್ ವಂ. ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ವಿವಿಧ ಕಾಲೇಜುಗಳ ಡೀನ್ ಹಾಗೂ ಪ್ರಾಂಶುಪಾಲರಾದ ಡಾ. ಆಂಟನಿ ಸಿಲ್ವಾನ್ ಡಿಸೋಜಾ, ಡಾ. ವೆಂಕಟೇಶ್ ಬಿ.ಎಂ., ಡಾ. ಶಿವಶಂಕರ ಎ.ಆರ್., ಪ್ರೊ. ಚೆರಿಶ್ಮಾ ಡಿಸಿಲ್ವಾ, ಸಿಸ್ಟರ್ ಧನ್ಯಾ ದೇವಸ್ಯ ಸೇರಿದಂತೆ ಫಾದರ್ ಮುಲ್ಲರ್ ಸಂಸ್ಥೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಡಾ. ಶೈಸೀಲ್ ಮ್ಯಾಥ್ಯೂ ಒಪ್ಪಂದದ ಕುರಿತು ಮಾಹಿತಿ ನೀಡಿದರು. ಸಂಪರ್ಕ ಅಧಿಕಾರಿ ಹಾಗೂ ಪ್ರೊಫೆಸರ್ ಡಾ. ಕೆಲ್ವಿನ್ ಪೀಟರ್ ಪಾಯ್ಸ್ ಕಾರ್ಯಕ್ರಮ ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿದರು. ಆವಿಷ್ಕಾರ್ ಯೋಗ ಟ್ರಸ್ಟ್ ಪರವಾಗಿ ಯೋಗ ಶಿಕ್ಷಕರಾದ ಉಷಾ ಕೆ. ಮತ್ತು ಗಿರಿಯಪ್ಪ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ