ಮಂಗಳೂರು : ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಸೇವಾ ನಿರ್ವಹಣೆಯಲ್ಲಿ ಜಾಗತಿಕ ವಿಮಾನ ನಿಲ್ದಾಣ ಉದ್ಯಮದ ಅತ್ಯುನ್ನತ ಮನ್ನಣೆಯಾದ 'ಲೆವೆಲ್ 5' ಮಾನ್ಯತೆಯನ್ನು ಪಡೆದುಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ಎಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ ನಡೆಸುವ 'ಎಪೋರ್ಟ್ ಕಸ್ಟಮರ್ ಎಕ್ಸ್ಪೀರಿಯನ್ಸ್ ಅಕ್ರೆಡಿಟೇಶನ್' ಕಾರ್ಯಕ್ರಮದ ಅಡಿಯಲ್ಲಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗಿದೆ. ಈ ಮೈಲಿಗಲ್ಲಿನೊಂದಿಗೆ, ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ಅಹಮದಾಬಾದ್ ನಂತರ ಈ ಮನ್ನಣೆ ಪಡೆದ ಮೂರನೇ ವಿಮಾನ ನಿಲ್ದಾಣವಾಗಿ ಮಂಗಳೂರು ಹೊರಹೊಮ್ಮಿದೆ. ಅಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಈ ಗೌರವಕ್ಕೆ ಪಾತ್ರವಾದ ಕರ್ನಾಟಕದ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯೂ ಇದಕ್ಕೆ ಸಂದಿದೆ. ಇಡೀ ದೇಶದಲ್ಲಿ ಈ ಜಾಗತಿಕ ಅತ್ಯುನ್ನತ ಮಾನ್ಯತೆಯನ್ನು ಹೊಂದಿರುವ ಕೇವಲ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಕೂಡ ಒಂದಾಗಿದೆ.
ಈ ವಿಮಾನ ನಿಲ್ದಾಣವು ಕೇವಲ 30 ತಿಂಗಳುಗಳ (2.5 ವರ್ಷ) ಅಲ್ಪಾವಧಿಯಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿದೆ. ಫೆಬ್ರವರಿ 2024ರಲ್ಲಿ ಲೆವೆಲ್ 3ರಲ್ಲಿದ್ದ ನಿಲ್ದಾಣವು, ಜೂನ್ 2025ರ ವೇಳೆಗೆ ಲೆವೆಲ್ 4ಕ್ಕೆ ಏರಿ, ಇದೀಗ ನೇರವಾಗಿ ಅತ್ಯುನ್ನತ ‘ಲೆವೆಲ್ 5’ ತಲುಪುವ ಮೂಲಕ ಗಮನಾರ್ಹ ಯಶಸ್ಸು ಕಂಡಿದೆ. ಈ 'ಲೆವೆಲ್ 5' ಮಾನ್ಯತೆಯು ವಿಮಾನ ನಿಲ್ದಾಣದ ಕಾರ್ಯತಂತ್ರ, ಸಂಸ್ಕೃತಿ, ಆಡಳಿತ, ಕಾರ್ಯಾಚರಣೆ ಹಾಗೂ ಸೇವಾ ವಿತರಣೆಯಲ್ಲಿ ಗ್ರಾಹಕರ ಅನುಭವಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ಇದು ಕೇವಲ ವಿಮಾನ ನಿಲ್ದಾಣದ ಸಿಬ್ಬಂದಿಯ ಶ್ರಮವನ್ನು ಮಾತ್ರವಲ್ಲದೆ, ಅಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಪಡೆಗಳು, ಕಸ್ಟಮ್ಸ್, ವಲಸೆ ವಿಭಾಗ ಮತ್ತು ವಿವಿಧ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ಪಾಲುದಾರರು ಪ್ರಯಾಣಿಕರ ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಜವಾಬ್ದಾರಿಯುತವಾಗಿ ಶ್ರಮಿಸುತ್ತಿರುವುದನ್ನು ಸಾಬೀತುಪಡಿಸುತ್ತದೆ.
ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲೂ ಮಂಗಳೂರು ಮುಂಚೂಣಿಯಲ್ಲಿದ್ದು, ಭಾರತದಲ್ಲೇ ಮೊದಲ ಬಾರಿಗೆ ವಿಮಾನ ನಿಲ್ದಾಣವೊಂದರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ‘ಅವಿಯೋ’ (Avio) ಆಪ್ ಅನ್ನು ಪರಿಚಯಿಸಲಾಗಿದೆ. ದಿನನಿತ್ಯದ ಕಾರ್ಯಾಚರಣೆ ಹಾಗೂ ವ್ಯವಹಾರದ ತಂತ್ರಗಳಲ್ಲಿ ಗ್ರಾಹಕರ ತೃಪ್ತಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಪ್ರಯಾಣಿಕರ ನಿರಂತರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸುವ ಸುಧಾರಿತ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗಿದೆ. ಇದರೊಂದಿಗೆ, ಸುಧಾರಿತ ಮೂಲಸೌಕರ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚಿನ ಹೂಡಿಕೆ ಮಾಡಲಾಗಿದ್ದು, ಇಡೀ ವಿಮಾನ ನಿಲ್ದಾಣದ ಪರಿಸರದಲ್ಲಿ ಸೇವಾ ಮನೋಭಾವದ ಸಂಸ್ಕೃತಿಯನ್ನು ಬೆಳೆಸಲು ನೌಕರರಿಗೆ ವಿಶೇಷ ತರಬೇತಿಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.