image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಮಗ್ರ ವೈದ್ಯಕೀಯ ದೃಷ್ಟಿಕೋನ ಬೆಳೆಸಿಕೊಳ್ಳಿ: ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಾ. ಮೋಹನ್ ಆಳ್ವ ಕರೆ

ಸಮಗ್ರ ವೈದ್ಯಕೀಯ ದೃಷ್ಟಿಕೋನ ಬೆಳೆಸಿಕೊಳ್ಳಿ: ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಾ. ಮೋಹನ್ ಆಳ್ವ ಕರೆ

ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್’ ಇತ್ತೀಚೆಗೆ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, ಭವಿಷ್ಯದ ವೈದ್ಯರು ವಿಶಾಲ ಮನೋಭಾವ ಮತ್ತು ಸಮಗ್ರ ವೈದ್ಯಕೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದು ಆಯುರ್ವೇದವು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದು, ಸುಮಾರು 17 ರಾಷ್ಟ್ರಗಳಿಗೆ ವಿಸ್ತರಣೆಯಾಗಿದೆ. ಯುರೋಪಿನ 25ಕ್ಕೂ ಹೆಚ್ಚು ದೇಶಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆಯುತ್ತಿರುವುದು ಈ ಚಿಕಿತ್ಸಾ ಪದ್ಧತಿಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಕೇಂದ್ರ ಸರ್ಕಾರವು ಆಯುಷ್ ಕ್ಷೇತ್ರದ ಅಭಿವೃದ್ಧಿಗಾಗಿ ₹3,500 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಈ ರಂಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಆಯುರ್ವೇದದ ಮೂಲ ತತ್ವಗಳನ್ನು ಭದ್ರವಾಗಿ ಉಳಿಸಿಕೊಂಡೇ ಚಿಕಿತ್ಸೆ ಮತ್ತು ಸಂಶೋಧನಾ ರಂಗದಲ್ಲಿ ನಿರಂತರ ಹೊಸ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದರೊಂದಿಗೆ ಅಲೋಪಥಿ, ದಂತ ವೈದ್ಯಕೀಯ, ಫಿಸಿಯೋಥೆರಪಿ, ಪ್ರಕೃತಿ ಚಿಕಿತ್ಸೆ ಮತ್ತು ಹೋಮಿಯೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳ ಬೆಳವಣಿಗೆಯನ್ನು ಗಮನಿಸಿ, ಅವುಗಳ ಉತ್ತಮ ಅಂಶಗಳನ್ನು ಸಂಯೋಜಿಸುವ ಸಮಗ್ರ ವೈದ್ಯಕೀಯ ವ್ಯವಸ್ಥೆಯ ಅಗತ್ಯವನ್ನು ಒತ್ತಿ ಹೇಳಿದರು. ಸಂಕುಚಿತ ದೃಷ್ಟಿಕೋನದಿಂದ ದೂರವಿದ್ದು, ಪ್ರಾಯೋಗಿಕ ಮತ್ತು ಜ್ಞಾನ ವಿನಿಮಯದ ಮನೋಭಾವನೆಯಿಂದ ಮಾತ್ರ ವೈದ್ಯಕೀಯ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಸಮಾರಂಭದಲ್ಲಿ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಪಿಜಿ ಡೀನ್ ಮಂಜುನಾಥ್ ಭಟ್, ಯುಜಿ ಡೀನ್ ಡಾ. ಸ್ವಪ್ನ ಕುಮಾರಿ, ಸಂಯೋಜಕರಾದ ಡಾ. ವಿಜಯಲಕ್ಷ್ಮಿ ಹಾಗೂ ಡಾ. ಸುರಭಿ ಕೃಷ್ಣ ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು ಮತ್ತು ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ ಶೆಟ್ಟಿ ಸ್ವಾಗತಿಸಿದರು, ಡಾ. ಗೀತಾ ಮಾರ್ಕೆಂಡೇಯ ಕಾರ್ಯಕ್ರಮ ನಿರೂಪಿಸಿದರೆ, ಡಾ. ಸ್ವಪ್ನ ವಂದಿಸಿದರು.

Category
ಕರಾವಳಿ ತರಂಗಿಣಿ