ಮಂಗಳೂರು : ವಿಶ್ವದ ಅತಿ ದೊಡ್ಡ ಬಿಸಿನೆಸ್ ನೆಟ್‌ವರ್ಕಿಂಗ್ ಸಂಸ್ಥೆಯಾದ ಬಿಎನ್‌ಐ (ಬಿಸಿನೆಸ್ ನೆಟ್‌ವರ್ಕ್ ಇಂಟರ್ನ್ಯಾಷನಲ್) ಅಂಗಸಂಸ್ಥೆಯಾದ 'ಬಿಎನ್‌ಐ ಇನ್‌ಸ್ಪೈರ್', ಮಂಗಳೂರಿನಲ್ಲಿ ಉದ್ಯಮಿಗಳು, ವೃತ್ತಿಪರರು ಮತ್ತು ಮುಖಂಡರಿಗಾಗಿ "ಇನ್‌ಸೈಟ್" (INSIGHT) ಎಂಬ ವಿಶೇಷ ಏಕದಿನ ಬಿಸಿನೆಸ್ ನೆಟ್‌ವರ್ಕಿಂಗ್ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಮಹತ್ವದ ಕಾರ್ಯಕ್ರಮವು ಜುಲೈ 18, 2026 ರ ಶನಿವಾರದಂದು ಸಂಜೆ 4:30 ರಿಂದ ಮಂಗಳೂರಿನ ಅತ್ತಾವರದಲ್ಲಿರುವ 'ಅವತಾರ್ ಹೋಟೆಲ್'ನಲ್ಲಿ ಜರುಗಲಿದೆ. ವಿವಿಧ ಉದ್ಯಮ ರಂಗದ ಪರಿಣಿತರನ್ನು ಒಂದೇ ವೇದಿಕೆಗೆ ತಂದು, ಹೊಸ ಉದ್ಯಮ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಪರಸ್ಪರ ಸಹಯೋಗವನ್ನು ವೃದ್ಧಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಮಂಗಳೂರು-ಉಡುಪಿ ವಲಯದಲ್ಲಿ 2018 ರಿಂದಲೂ ಬಿಎನ್‌ಐ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಣೇಶ್ ಎನ್. ಶರ್ಮಾ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಆರು ಮತ್ತು ಉಡುಪಿಯಲ್ಲಿ ಮೂರು ಚಾಪ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಆಯೋಜಿಸಲಾಗಿರುವ ಈ "ಇನ್‌ಸೈಟ್" ಕಾರ್ಯಕ್ರಮವು ಸಂಪೂರ್ಣವಾಗಿ ಹೊಸ ಮತ್ತು ಕ್ರಿಯಾತ್ಮಕ ರೂಪದಲ್ಲಿ ಮೂಡಿಬರಲಿದ್ದು, ಮುಖ್ಯವಾಗಿ 4 ಪ್ರಮುಖ ಕ್ಷೇತ್ರಗಳ ಕುರಿತು ತಜ್ಞರಿಂದ ಪ್ಯಾನೆಲ್ ಚರ್ಚೆಗಳು ನಡೆಯಲಿವೆ.