ಮಂಗಳೂರು : ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು ಕುಲಾಯಿ ವತಿಯಿಂದ 2026ರ ಜುಲೈ 16, ಗುರುವಾರದಂದು ವಾರ್ಷಿಕ ಶ್ರೀ ಜಗನ್ನಾಥ ರಥಯಾತ್ರೆಯನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ ಎಂದು ಇಸ್ಕಾನ್ ಮಂಗಳೂರು ಕುಲಾಯಿ ಅಧ್ಯಕ್ಷರಾದ ನಾಮ ನಿಷ್ಠ ದಾಸ ತಿಳಿಸಿದರು. ನಗರದ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ,
ಮಂಗಳೂರು, ಸುರತ್ಕಲ್, ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ರಥಯಾತ್ರೆಯು ಜುಲೈ 16ರ ಸಂಜೆ 4.00 ಗಂಟೆಗೆ ಸುರತ್ಕಲ್ ಜಂಕ್ಷನ್‌ನಿಂದ ಪ್ರಾರಂಭವಾಗಿ ಇಸ್ಕಾನ್ ಮಂಗಳೂರು ಕುಲಾಯಿ ದೇವಸ್ಥಾನದವರೆಗೆ ಸಾಗಲಿದೆ. ಸುಂದರವಾಗಿ ಅಲಂಕರಿಸಲ್ಪಡುವ ಶ್ರೀ ಜಗನ್ನಾಥರ ರಥದೊಂದಿಗೆ ಹರಿನಾಮ ಸಂಕೀರ್ತನೆ, ಭಜನೆ, ಸಾಂಪ್ರದಾಯಿಕ ವಾದ್ಯಗೋಷ್ಠಿ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಥಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶ್ರೀ ಜಗನ್ನಾಥರ ರಥವನ್ನು ಎಳೆಯುವ ಅಪೂರ್ವ ಅವಕಾಶ ಲಭ್ಯವಿರಲಿದ್ದು, ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಬಂದು ಈ ದೈವಿಕ ಅನುಭವದ ಭಾಗವಾಗುವಂತೆ ಆಹ್ವಾನಿಸಿದರು.
ರಥಯಾತ್ರೆಯ ನಂತರ ಸಂಜೆ 7.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ. "ಶ್ರೀ ಜಗನ್ನಾಥ ರಥಯಾತ್ರೆ ಕೇವಲ ಧಾರ್ಮಿಕ ಮೆರವಣಿಗೆಯಲ್ಲ; ಅದು ಭಗವಂತನ ಅಪಾರ ಕರುಣೆ ಮತ್ತು ಪ್ರೀತಿಯ ಪ್ರತೀಕವಾಗಿದೆ. ಭಗವಂತನೇ ತನ್ನ ಭಕ್ತರನ್ನು ಆಶೀರ್ವದಿಸಲು ದೇವಾಲಯದಿಂದ ಹೊರಬರುವ ಅಪೂರ್ವ ಉತ್ಸವ ಇದು. ಈ ರಥಯಾತ್ರೆ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಸಂತೋಷವನ್ನು ಅನುಭವಿಸುವ ಅಪೂರ್ವ ಅವಕಾಶವನ್ನು ಒದಗಿಸುತ್ತದೆ" ಎಂದು ತಿಳಿಸಿದ್ದಾರೆ.
ಇಸ್ಕಾನ್ ಮಂಗಳೂರು ಕುಲಾಯಿ ಕೇಂದ್ರವು ಕರಾವಳಿ ಕರ್ನಾಟಕದಲ್ಲಿ ಆಧ್ಯಾತ್ಮಿಕ ಜಾಗೃತಿ, ಮೌಲ್ಯಾಧಾರಿತ ಶಿಕ್ಷಣ, ಯುವಜನರ ವ್ಯಕ್ತಿತ್ವ ವಿಕಾಸ ಹಾಗೂ ಸಮಾಜಸೇವೆಯ ಕ್ಷೇತ್ರದಲ್ಲಿ ಮಹತ್ವದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ವಿಶ್ವದ ಅತಿ ದೊಡ್ಡ ಆನ್‌ಲೈನ್ ಭಗವದ್ಗೀತೆ ಕೋರ್ಸ್ ಮೂಲಕ 12 ಭಾಷೆಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಮೌಲ್ಯಗಳನ್ನು ತಲುಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ. ಅಲ್ಲದೆ, ಪ್ರಸ್ತುತ ಸಂಸ್ಥೆಯ ವತಿಯಿಂದ ವೈದಿಕ ಕಾಲೇಜು ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರಿವಾಸ್ ದಾಸ್ ಮತ್ತು ಸರ್ವನಾಥ್ ನಿಥಾಯ್ ದಾಸ್ ಉಪಸ್ಥಿತರಿದ್ದರು.