image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖಾಸಗೀಕರಣ ಹಾಗೂ ಟಾರ್ಗೆಟ್ ಕಿರುಕುಳ ವಿರುದ್ಧ ಅಂಚೆ ನೌಕರರ ದೇಶವ್ಯಾಪಿ ಮುಷ್ಕರ

ಖಾಸಗೀಕರಣ ಹಾಗೂ ಟಾರ್ಗೆಟ್ ಕಿರುಕುಳ ವಿರುದ್ಧ ಅಂಚೆ ನೌಕರರ ದೇಶವ್ಯಾಪಿ ಮುಷ್ಕರ

ಮಂಗಳೂರು : ಭಾರತೀಯ ಅಂಚೆ ಇಲಾಖೆಯ 170 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ನೌಕರರು ಜನಸಾಮಾನ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಇಲಾಖೆಯನ್ನು ಕೇವಲ ಲಾಭದಾಯಕ ಉದ್ಯಮವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ನೌಕರರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ವಿದೇಶಿ ಸಲಹಾ ಸಂಸ್ಥೆಯಾದ ಮೆಕಿನ್ಸೆ (McKinsey) ಶಿಫಾರಸಿನ ಮೇರೆಗೆ ನಡೆಯುತ್ತಿರುವ ಇಲಾಖೆಯ ಖಾಸಗೀಕರಣದ ಕ್ರಮಗಳು ಹಾಗೂ ಸಿಬ್ಬಂದಿಗಳ ಮೇಲೆ ಹೇರಲಾಗುತ್ತಿರುವ ತೀವ್ರ ಮಾನಸಿಕ ಒತ್ತಡವನ್ನು ಖಂಡಿಸಿ ಭಾರತೀಯ ಅಂಚೆ ನೌಕರರ ಒಕ್ಕೂಟ, ಕರ್ನಾಟಕ ವಲಯವು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಇಲಾಖೆಯಲ್ಲಿ 'ಟಾರ್ಗೆಟ್ ಸಾಧನೆ' ಹೆಸರಿನಲ್ಲಿ ಸಿಬ್ಬಂದಿ ಹಾಗೂ ಜಿಡಿಎಸ್ (GDS) ನೌಕರರ ಮೇಲೆ ವಿಪರೀತ ಒತ್ತಡ ಹೇರಲಾಗುತ್ತಿದ್ದು, ತಮ್ಮ ಸ್ವಂತ ಹಣದಿಂದಲೇ ವಿವಿಧ ಖಾತೆಗಳನ್ನು ತೆರೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ಒಕ್ಕೂಟ ದೂರಿದೆ. ಈ ಶೋಷಣೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಒಕ್ಕೂಟವು ಹಂತ-ಹಂತದ ಹೋರಾಟದ ರೂಪರೇಖೆಯನ್ನು ಪ್ರಕಟಿಸಿದೆ. ಜುಲೈ 20 ರಿಂದ 27 ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ, ಜುಲೈ 28 ರಂದು ಮಧ್ಯಾಹ್ನದ ಊಟದ ವಿರಾಮದ ಅವಧಿಯಲ್ಲಿ ವಿಭಾಗೀಯ ಕಚೇರಿಗಳ ಮುಂದೆ ಪ್ರತಿಭಟನೆ, ಆಗಸ್ಟ್ 5 ರಂದು ಒಂದು ದಿನದ ದೇಶವ್ಯಾಪಿ ಮುಷ್ಕರ ಹಾಗೂ ಆಗಸ್ಟ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

ನೌಕರರ ಪ್ರಮುಖ ಬೇಡಿಕೆಗಳಲ್ಲಿ ಸಿಬ್ಬಂದಿಯ ಮೇಲಿನ ಟಾರ್ಗೆಟ್ ಕಿರುಕುಳ ನಿಲ್ಲಿಸುವುದು, ಖಾಲಿ ಇರುವ ಮೇಲ್ ಮೋಟಾರ್ ಸರ್ವೀಸ್ ಹಾಗೂ ಸಿವಿಲ್ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡುವುದು, ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಅನುಕಂಪದ ಆಧಾರಿತ ನೇಮಕಾತಿಯಲ್ಲಿರುವ ಶೇಕಡಾ 5 ರ ಮಿತಿಯನ್ನು ತೆಗೆದುಹಾಕುವುದು ಮತ್ತು ಸೆಪ್ಟೆಂಬರ್ 17 (ವಿಶ್ವಕರ್ಮ ಜಯಂತಿ) ಅನ್ನು ರಾಷ್ಟ್ರೀಯ ಕಾರ್ಮಿಕ ದಿನವೆಂದು ಘೋಷಿಸಿ ಅಂಚೆ ಇಲಾಖೆಗೆ ರಜೆ ನೀಡುವುದು ಸೇರಿವೆ. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ವಲಯ ಕಾರ್ಯದರ್ಶಿ ಶ್ರೀ ವೀರೇಶ್, ಪದಾಧಿಕಾರಿಗಳಾದ ಶ್ರೀ ರವಿ ಚೌದ್ರಿ, ಶ್ರೀ ದಯಾನಂದ ಕತ್ತಲಸಾರ್, ಶ್ರೀ ದೇವಪ್ಪ ಜಿ ಹಾಗೂ ಶ್ರೀ ಪ್ರಕಾಶ್ ಕರಡಿ ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ