image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಪ್ಪಿನಮೊಗರು ಗಣೇಶೋತ್ಸವ ಸಮಿತಿ ಮಹಾಸಭೆ: ಸೆ. 13 ರಿಂದ ಉತ್ಸವ

ಜಪ್ಪಿನಮೊಗರು ಗಣೇಶೋತ್ಸವ ಸಮಿತಿ ಮಹಾಸಭೆ: ಸೆ. 13 ರಿಂದ ಉತ್ಸವ

ಮಂಗಳೂರು : ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು ಭಾನುವಾರ ಬೆಳಿಗ್ಗೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀ ಜೆ. ನಾಗೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ, ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಷ್ ವಿ. ಅಡಪ ಅವರು ಸಭೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕು. ವೈಷ್ಣವಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.

ಈ ಬಾರಿ 18ನೇ ವರ್ಷದ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ ತಂತ್ರಿ ಅವರ ಪೌರೋಹಿತ್ಯದಲ್ಲಿ 2026ರ ಸೆಪ್ಟೆಂಬರ್ 13ರಿಂದ 15ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳು, ಕ್ರೀಡೋತ್ಸವ ಆಯೋಜನೆ ಹಾಗೂ ಉತ್ಸವದ ಯಶಸ್ವಿ ನಿರ್ವಹಣೆಗಾಗಿ ನಿಧಿ ಸಂಗ್ರಹಣೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು. ಬಳಿಕ 17ನೇ ವರ್ಷದ ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀ ಶೈಲೇಶ್ ಭಂಡಾರಿ ತಾರ್ದೋಲ್ಯ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು.

ಕಾರ್ಯಾಧ್ಯಕ್ಷರಾದ ಟಿ. ಪ್ರವೀಣ್ ಚಂದ್ರ ಆಳ್ವರವರು ಮಾತನಾಡಿ, "ಜಪ್ಪಿನಮೊಗರು ಶ್ರೀ ಗಣೇಶೋತ್ಸವವು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಸರುವಾಸಿಯಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ 18ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸೋಣ" ಎಂದು ಕರೆ ನೀಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಜೆ. ಅನಿಲ್ ಶೆಟ್ಟಿ ಜೆ. ಮನ್ಕು ತೋಟಗುತ್ತು, ಕಾರ್ಯಾಧ್ಯಕ್ಷರಾದ ಸುಧಾಕರ್ ಜೆ., ಲ| ಗಣೇಶ್ ಶೆಟ್ಟಿ ಕಂರ್ಬುಕೆರೆ, ಲ| ಶ್ರೀಧರ್ ರಾಜ್ ಶೆಟ್ಟಿ, ಉದಯ ಕೊಟ್ಟಾರಿ ಬಜಾಲ್ ಹಾಗೂ ಮುಖ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಬೀದಿ ಮನೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಶ್ರೀ ಸಂಪತ್ ತಾರ್ದೋಲ್ಯ, ನವೀನ್ ಸನಿಲ್ ತಾರ್ದೋಲ್ಯ, ಯೋಗೀಶ್ ಗಾಣಿಗ ತಾರ್ದೋಲ್ಯ, ರತ್ವೀಕ್ ರಾಜ್ ಶೆಟ್ಟಿ ಕಡೇಕಾರ್ ಹಾಗೂ ನವೀನ್ ಪೂಜಾರಿ ತಾರ್ದೋಲ್ಯ ಅವರನ್ನು ಸಮಿತಿಯ ನೂತನ ಸದಸ್ಯರಾಗಿ ಗೌರವಪೂರ್ವಕವಾಗಿ ಸೇರ್ಪಡೆಗೊಳಿಸಲಾಯಿತು. ಸಂಚಾಲಕರಾದ ಹರೀಶ್‌ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರೆ, ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ಕವಿತಾ ಗಂಗಾಧರ್‌ರವರು ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ