image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳಾ ಸಬಲೀಕರಣದಿಂದ ಸಮಾಜದ ಪ್ರಗತಿ: ಡಾ. ಪ್ರಣಮ್ಯ ಭಟ್

ಮಹಿಳಾ ಸಬಲೀಕರಣದಿಂದ ಸಮಾಜದ ಪ್ರಗತಿ: ಡಾ. ಪ್ರಣಮ್ಯ ಭಟ್

ಮೂಡುಬಿದಿರೆ: ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಅಪಾರ ಸಾಧ್ಯತೆಗಳಿಗೆ ಸೂಕ್ತ ಅವಕಾಶ ಹಾಗೂ ಸಮಾನತೆ ದೊರೆತಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅದರಲ್ಲೂ ಮಹಿಳೆಯರ ಸಬಲೀಕರಣವು ಕುಟುಂಬ ಮತ್ತು ರಾಷ್ಟ್ರದ ಪ್ರಗತಿಗೆ ಮುಖ್ಯ ಅಡಿಪಾಯವಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಣಮ್ಯ ಭಟ್ ಅಭಿಪ್ರಾಯಪಟ್ಟರು.

ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ದೂರು ನಿರ್ವಹಣಾ ಸಮಿತಿಯ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ನಾಯಕತ್ವದ ಅವಕಾಶಗಳು ಸಿಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದರೂ, ನಿಜವಾದ ಸಮಾನತೆಗಾಗಿ ಜನರ ಮನೋಭಾವದಲ್ಲಿ ಬದಲಾವಣೆ ಬರಬೇಕಿದೆ. ದೈಹಿಕ ಹಾಗೂ ಮಾನಸಿಕ ಭಿನ್ನತೆಗಳಿದ್ದರೂ ಹಕ್ಕುಗಳು, ಗೌರವ ಹಾಗೂ ಅವಕಾಶಗಳ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಅವರು ಹೇಳಿದರು.

ಶಿಕ್ಷಣವು ಬದುಕನ್ನು ರೂಪಿಸುವ ಅತ್ಯಂತ ಪ್ರಬಲ ಸಾಧನವಾಗಿದ್ದು, ಮುಂದಿನ ಪೀಳಿಗೆಗೆ ಸಮಾನತೆ ಹಾಗೂ ಗೌರವದ ಮೌಲ್ಯಗಳನ್ನು ಇದರ ಮೂಲಕವೇ ಕಲಿಸಬೇಕಾಗಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನಡೆಯುವ ವಾತಾವರಣ ನಿರ್ಮಾಣವಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ, ಇಂದು ಶಿಕ್ಷಣ, ವಿಜ್ಞಾನ, ಕ್ರೀಡೆ, ಉದ್ಯಮ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮಹಿಳೆಯರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಸುರಕ್ಷತೆ, ಆತ್ಮವಿಶ್ವಾಸ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕಾಲೇಜಿನಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದ್ದು, ಇವು ವಿದ್ಯಾರ್ಥಿನಿಯರಿಗೆ ಮುಕ್ತವಾಗಿ ಸ್ಪಂದಿಸಲಿವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಮಹಿಳಾ ಕ್ಷೇಮಪಾಲನಾ ಸಮಿತಿಯ ಸಂಯೋಜಕಿ ರಮ್ಯಾ ಶೆಟ್ಟಿ ಹಾಗೂ ಆಂತರಿಕ ದೂರು ನಿರ್ವಹಣಾ ಸಮಿತಿಯ ಸಂಯೋಜಕಿ ಡಾ. ಸುಲತಾ ವಿದ್ಯಾಧರ್ ಉಪಸ್ಥಿತರಿದ್ದರು. ರಮ್ಯಾ ಶೆಟ್ಟಿ ಸ್ವಾಗತಿಸಿದರೆ, ವಿದ್ಯಾರ್ಥಿನಿ ಅನನ್ಯ ಅತಿಥಿ ಪರಿಚಯ ಮಾಡಿಕೊಟ್ಟರು. ಸೃಜನ್ಯ ಧನ್ಯವಾದ ಅರ್ಪಿಸಿ, ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.

 

Category
ಕರಾವಳಿ ತರಂಗಿಣಿ