ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಎಸಿಸಿಎ (Association of Chartered Certified Accountants – UK) ಜೂನ್–2026ರ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸ್ಕಿಲ್ಸ್ ಲೆವೆಲ್‌ನ ಫಿನಾನ್ಷಿಯಲ್ ರಿಪೋರ್ಟಿಂಗ್ ವಿಷಯದಲ್ಲಿ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಮಿಕ್ಷಾ ಡಿ. ನಾಯಕ್, ಮೂಲ್ಯ ಐಶ್ವರ್ಯ, ಮೊಹಮ್ಮದ್ ಅರ್ಫಾಜ್, ಖದೀಜಾ ತನಾಝಾ, ಹಫೀಝಾ, ಶಾಜಿನ್ ಅಬ್ದುಲ್ ರಹಿಮಾನ್, ತೇಜಸ್ ಸಿ. ಜಿ., ಶೇಖ್ ಅಬ್ದುಲ್ ತನ್ಝೀಮ್, ಮೊಹಮ್ಮದ್ ನಾಫಿ, ಮೊಹಮ್ಮದ್ ಬಶೀರ್ ಹಾಗೂ ಲಿಯೋನಾ ಅವ್ರಿಲ್ ರೋಡ್ರಿಗಸ್ ಯಶಸ್ವಿಯಾಗಿ ಉತ್ತೀರ್ಣರಾದವರು. ಇನ್ನು ಪ್ರೊಫೆಷನಲ್ ಲೆವೆಲ್‌ನ ಸ್ಟ್ರಾಟಜಿಕ್ ಬಿಸಿನೆಸ್ ರಿಪೋರ್ಟಿಂಗ್ ವಿಷಯದಲ್ಲಿ ಮೊಹಮ್ಮದ್ ಇಫಾಝ್ ಹಾಗೂ ನಿಶಾಂತ್ ಬಿ. ಪೂಜಾರಿ ಉತ್ತೀರ್ಣರಾಗಿದ್ದರೆ, ಪ್ರೊಫೆಷನಲ್ ಲೆವೆಲ್‌ನ ಅಡ್ವಾನ್ಸ್ಡ್ ಆಡಿಟ್ ಆ್ಯಂಡ್ ಅಶ್ಯುರೆನ್ಸ್ ವಿಷಯದಲ್ಲಿ ಅಲ್ಮಾಜ್ ಉತ್ತೀರ್ಣರಾಗುವ ಮೂಲಕ ಕಾಲೇಜಿನ ಸಾಧನೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ಎಸಿಸಿಎ ಅರ್ಹತೆ ಪಡೆದವರಿಗೆ ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು, ಆಡಿಟ್ ಹಾಗೂ ಹಣಕಾಸು ಸಲಹಾ ಸಂಸ್ಥೆಗಳಲ್ಲಿ ಅತ್ಯುತ್ತಮ ವೃತ್ತಿ ಅವಕಾಶಗಳಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಎಸಿಸಿಎ ಅತ್ಯಂತ ಬೇಡಿಕೆಯ ವೃತ್ತಿಪರ ಅರ್ಹತೆಯಾಗಿದ್ದು, ಇಂತಹ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಳ್ವಾಸ್ ಕಾಲೇಜು ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್ ಹಾಗೂ ಕೋರ್ಸ್ ಸಂಯೋಜಕ ವಿಘ್ನೇಶ್ ಪ್ರಭು ಅಭಿನಂದಿಸಿದ್ದಾರೆ.