image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮತದಾರರ ಪಟ್ಟಿ ಪರಿಷ್ಕರಣೆ: ಕಾರ್ಯಕರ್ತರಿಗೆ ಐವನ್ ಡಿ'ಸೋಜಾ ಕರೆ

ಮತದಾರರ ಪಟ್ಟಿ ಪರಿಷ್ಕರಣೆ: ಕಾರ್ಯಕರ್ತರಿಗೆ ಐವನ್ ಡಿ'ಸೋಜಾ ಕರೆ

ಮಂಗಳೂರು : ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು, ನೈಜ ಮತದಾರರ ನೋಂದಣಿಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಅವರು ಕರೆ ನೀಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 203 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಕೋ-ಆರ್ಡಿನೇಟರ್‌ಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಬೂತ್ ಮಟ್ಟದ ಏಜೆಂಟರು (BLA) ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಮತದಾರರ ನೋಂದಣಿ ಪ್ರಕ್ರಿಯೆಗೆ ನೆರವಾಗಬೇಕು. ಈ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದರೆ ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗುವುದನ್ನು ತಡೆಯಬಹುದು ಎಂದು ಅವರು ಹೇಳಿದರು. ಯಾವುದೇ ಕಾರಣಕ್ಕೂ ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಮತ್ತು ಅನ್ಯ ಉದ್ದೇಶಕ್ಕಾಗಿ ನಗರಕ್ಕೆ ಬಂದು ಹೆಸರು ನೋಂದಾಯಿಸಲು ಯತ್ನಿಸುವವರ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಿದರು. ನೈಜ ಮತದಾರರಿಂದ ಅಗತ್ಯ ದಾಖಲೆಗಳೊಂದಿಗೆ ಎನ್ಯೂಮರೇಷನ್ ಫಾರ್ಮ್ ಹಾಗೂ ನಮೂನೆ-7 ಸೇರಿದಂತೆ ಸಂಬಂಧಿತ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡಿಸಿ ಸಲ್ಲಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಅವರು ಕಾರ್ಯಕರ್ತರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ, ಮನೆ-ಮನೆಗೆ ಭೇಟಿ ನೀಡುವ ವೇಳೆ ಮಳೆಗಾಲದಲ್ಲಿ ದಾಖಲೆಗಳು ಹಾಗೂ ಎನ್ಯೂಮರೇಷನ್ ಫಾರ್ಮ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲವಾಗುವ ಬ್ಯಾಗ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ಯಾಗ್‌ಗಳನ್ನು ವಿತರಿಸಿದ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಅವರು ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ಎದುರಾದ ಸಮಸ್ಯೆಗಳು ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ, ಜನರಲ್ಲಿ ಜಾಗೃತಿ ಮೂಡಿಸಿ ಎನ್ಯೂಮರೇಷನ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಲು ನೆರವಾಗುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಮೋಹನ್, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸಲೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಪಕ್ಷದ ಎಸ್‌ಐಆರ್ ಸಂಯೋಜಕರು, ಬಿಎಲ್‌ಎ-2ಗಳು, ಕ್ಷೇತ್ರದ ಎಸ್‌ಐಆರ್ ಕೋ-ಆರ್ಡಿನೇಟರ್‌ಗಳು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ