ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ವಿಕಾಸ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ತೋಡು ಕಾಮಗಾರಿ ಪ್ರದೇಶಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿ'ಸೋಜಾ ಅವರು ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿ ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ನಿಗದಿತ ಗುಣಮಟ್ಟ ಹಾಗೂ ಮಾನದಂಡಗಳಿಗೆ ಅನುಗುಣವಾಗಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಪ್ರಸ್ತುತ ಮಳೆಗಾಲವಾಗಿರುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಮಹಾತ್ಮಾ ಗಾಂಧಿ ವಿಕಾಸ ಯೋಜನೆಯಡಿ ನಗರದ ವಿವಿಧ ಭಾಗಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಪ್ರತಿಯೊಂದು ಕಾಮಗಾರಿಯೂ ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳು ಗುತ್ತಿಗೆದಾರರಿಗೆ ನಿರಂತರ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದು ಐವನ್ ಡಿ'ಸೋಜಾ ಹೇಳಿದರು. ಸಾರ್ವಜನಿಕರ ತೆರಿಗೆ ಹಣದಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಕಳಪೆ ಕಾಮಗಾರಿಗೆ ಅವಕಾಶವಿಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹಬೀಬುಲ್ಲಾ ಕಣ್ಣೂರು, ಅಬ್ದುಲ್ ಖಾದರ್, ಅಶ್ರಫ್ ಬೀಡು, ಶರೀಫ್ ಬೊಲ್ಲೂರುಗುಡ್ಡೆ, ಮೋನು ಬೊಲ್ಲೂರುಗುಡ್ಡೆ, ಲತೀಫ್ ಕುಂಡಾಲ, ಅಕ್ಬರ್, ಶರೀಫ್ ಕುಂಡಾಳ, ಪುತ್ತ, ಫಾರೂಕ್ ಹಾಗೂ ಯುವ ಕಾಂಗ್ರೆಸ್ ಕಣ್ಣೂರು ವಾರ್ಡ್ ಅಧ್ಯಕ್ಷರಾದ ಮುನ್ನ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.