image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೈದ್ಯ ವೃತ್ತಿಯಲ್ಲಿ ನೈತಿಕತೆ, ಸೇವೆಗೆ ಆದ್ಯತೆ ಅಗತ್ಯ: ಡಾ. ಎಂ. ಮೋಹನ ಆಳ್ವ

ವೈದ್ಯ ವೃತ್ತಿಯಲ್ಲಿ ನೈತಿಕತೆ, ಸೇವೆಗೆ ಆದ್ಯತೆ ಅಗತ್ಯ: ಡಾ. ಎಂ. ಮೋಹನ ಆಳ್ವ

ಮೋಡಬಿದಿರೆ : ವೈದ್ಯಕೀಯ ವೃತ್ತಿಯಲ್ಲಿ ರೋಗಿಯ ಸುರಕ್ಷತೆ, ನೈತಿಕತೆ ಹಾಗೂ ಸೇವಾ ಮನೋಭಾವವೇ ಅತ್ಯಂತ ಪ್ರಮುಖ ಮೌಲ್ಯಗಳಾಗಿವೆ. ವೈದ್ಯ ಮತ್ತು ರೋಗಿಯ ಸಂಬಂಧವು ಪರಸ್ಪರ ನಂಬಿಕೆ ಹಾಗೂ ಜವಾಬ್ದಾರಿಯ ಮೇಲೆ ನಿರ್ಮಾಣವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲಾನಂತರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ವೈದ್ಯರು ಹೊಸ ತಂತ್ರಜ್ಞಾನ ಹಾಗೂ ಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ ಮಾತನಾಡಿ, ವೈದ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವರ ಹಿತ ಕಾಯುವುದು ಸಂಘದ ಮುಖ್ಯ ಉದ್ದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಐಎಂಎ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು. ಕರ್ನಾಟಕ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ವೈದ್ಯಕೀಯ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿಯೂ ಬೆಳೆಯುತ್ತಿದೆಯಾದರೂ, ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡರೆ ಯಾವುದೇ ಸಮಸ್ಯೆ ಎದುರಾಗದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳ ಮತ್ತು ಆಳ್ವಾಸ್ ಸಂಸ್ಥೆಯ ಸಹಭಾಗಿತ್ವವನ್ನು ಶ್ಲಾಘಿಸಿದರು. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಡಿ.ಎಸ್. ಶಿವಪ್ರಕಾಶ್ ಅವರು ವೈದ್ಯರು ಎದುರಿಸುತ್ತಿರುವ ತಪ್ಪು ತಿಳುವಳಿಕೆ ಮತ್ತು ಸಂವಹನ ಕೊರತೆಯ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕೆಂದು ಕರೆ ನೀಡಿದರು.

ಮೂಡುಬಿದಿರೆಯಲ್ಲಿ ಐಎಂಎಯ 183ನೇ ಘಟಕ ಸ್ಥಾಪನೆಯಾಗುತ್ತಿರುವುದಕ್ಕೆ ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ವೈದ್ಯರ ಮೇಲೆ ನಡೆಯುವ ಅನಗತ್ಯ ದಾಳಿಗಳನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಸಂಯೋಜಕ ಡಾ. ಜಿ.ಕೆ. ಭಟ್ ಒತ್ತಾಯಿಸಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ವೈದ್ಯರಾದ ಡಾ. ಪ್ರಭಾಚಂದ್ರ ಜೈನ್, ಡಾ. ಕೆ.ಆರ್. ಜೋಯಿಷಿ, ಡಾ. ಜಯಗೋಪಾಲ್ ತೊಳ್ಪಾಡಿ, ಡಾ. ಲೀಲಾ ಎಸ್. ಭಟ್ ಹಾಗೂ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಡಾ. ಶಮಂತ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಆಶೀಶ್ ಶರ್ಮ ವಂದಿಸಿದರು ಮತ್ತು ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ