image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾಗಿರಿಯಲ್ಲಿ ರಂಗಭೂಮಿ ಜೀವಕಳೆ ತುಂಬಿದ ‘ಕನ್ನಡ ಗಾನಗುಚ್ಛ’

ವಿದ್ಯಾಗಿರಿಯಲ್ಲಿ ರಂಗಭೂಮಿ ಜೀವಕಳೆ ತುಂಬಿದ ‘ಕನ್ನಡ ಗಾನಗುಚ್ಛ’

ಮೂಡುಬಿದಿರೆ: ಕನ್ನಡ ಸಾಹಿತ್ಯದ ಸಂಗೀತ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಅಪರೂಪದ ಪ್ರಯೋಗ ‘ಕನ್ನಡ ಗಾನಗುಚ್ಛ’ ಕರ‍್ಯಕ್ರಮ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನರಾಮ್ ಸುಳ್ಯರ ಸಂಯೋಜನೆಯಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಆಯೋಜನೆಗೊಂಡ ೨ ಗಂಟೆಗಳ ಈ ಕರ‍್ಯಕ್ರಮವನ್ನು ವೀಕ್ಷಿಸಿ ಅವರು ಮಾತನಾಡಿದರು.

ಕಲಾವಿದರ ಪ್ರದರ್ಶನವನ್ನು ಶ್ಲಾಘಿಸಿದ ಡಾ. ಆಳ್ವ, ಹಾಡಿಗೆ ಇರುವ ಅಪಾರ ಶಕ್ತಿಯನ್ನು ಕಲಾವಿದರು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ. ಇಡೀ ರಂಗಭೂಮಿಯ ಚಿತ್ರಣವನ್ನು ಸಂಗೀತದ ಮೂಲಕವೇ ಕಟ್ಟಿಕೊಟ್ಟ ಈ ಕಾರ್ಯಕ್ರಮ ಜೀವಕಳೆಯಿಂದ ತುಂಬಿತ್ತು ಎಂದರು. ರಂಗಗೀತೆಗಳಲ್ಲಿ ಜನಪದ ಹಾಗೂ ಸುಗಮ ಸಂಗೀತದ ಸೊಗಸಾದ ಲೇಪನವಿದ್ದು, ಅವುಗಳಲ್ಲಿ ವಸ್ತು ವಿವೇಚನೆ ಮತ್ತು ಸಂಭಾಷಣೆಯ ಸತ್ವ ಅಡಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಂದಪದ್ಯ, ರಂಗಗೀತೆ, ಜಾನಪದ, ಮಕ್ಕಳ ಗೀತೆ, ಜೋಗುಳ, ವಚನ, ದಾಸರ ಪದ, ಭಜನೆ, ಕವ್ವಾಲಿ, ಗೀಗಿಪದ, ಕಂಸಾಳೆ, ಸೋಲಿಗರ ಹಾಡು, ಮಂಟೇಶ್ವರ ಸ್ವಾಮಿಯ ಪದ್ಯ ಹಾಗೂ ತುಳು ಪಾಡ್ದನ ಸೇರಿದಂತೆ ಒಟ್ಟು ೨೮ ವೈವಿಧ್ಯಮಯ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

‘ಹೂವ ಚೆಲ್ಲಾಡ ಬನ್ನಿರೋ' ಗ್ರಾಮೀಣ ಸೊಬಗನ್ನು ಬಿಂಬಿಸಿದರೆ, ‘ಅಂತಿಂಥಾ ಊಟವಲ್ಲ' ರಂಗಗೀತೆ ಆತಿಥ್ಯ ಸಂಸ್ಕೃತಿಯನ್ನು ಪರಿಚಯಿಸಿತು. ‘ತೂಗುವೆ ತೊಟ್ಟಿಲು' ತಾಯಿಯ ಮಮತೆಯನ್ನು, ‘ತಂದನ್ನ ತಾನನ' ಕಂಸಾಳೆ ಪದ ಭಕ್ತಿಯನ್ನು ಹಾಗೂ ‘ನರಿಯಣ್ಣನ ಸಂಗೀತ ಸಭೆ' ಮಕ್ಕಳ ಮನರಂಜನೆಯನ್ನು ಪ್ರತಿಪಾದಿಸಿತು. ಇದೇ ರೀತಿ ಭಕ್ತಿ, ದಾಂಪತ್ಯ ಜೀವನ, ಶಿಕ್ಷಣದ ಅಗತ್ಯತೆ, ಗ್ರಾಮದೇವತೆಯ ಆರಾಧನೆ, ಜೀವನದ ಸತ್ಯ ಮತ್ತು ತುಳುನಾಡಿನ ಇತಿಹಾಸವನ್ನು ಸಾರುವ ವಿವಿಧ ಹಾಡುಗಳು ಪ್ರೇಕ್ಷಕರ ಮನಗೆದ್ದವು.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ, ಮಮತಾ ಕಲ್ಮಕಾರು, ಮನುಜ ನೇಹಿಗ ಸುಳ್ಯ, ಸಮನ್ವಿತ ಹುಬ್ಬಳ್ಳಿ, ಸತ್ಯಜಿತ್ ರಾವ್, ಸತೀಶ್ ಸುರತ್ಕಲ್, ಸಂತೋಷ್ ಉಡುಪಿ, ತೇಜಸ್ವಿನಿ ತರೀಕೆರೆ, ನಿಶ್ಮಿತಾ, ವಿಸ್ಮಯ ಪೈ, ಸಿಂಚನಾ ಶೆಟ್ಟಿ ಹಾಗೂ ಕೃಪಾ ನಾಯಕ್ ಸೇರಿದಂತೆ ಹಲವು ಕಲಾವಿದರು ವಿವಿಧ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Category
ಕರಾವಳಿ ತರಂಗಿಣಿ