ಧರ್ಮಸ್ಥಳ : ಬೆಂಗಳೂರಿನ ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ವತಿಯಿಂದ ಉಜಿರೆಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಪತ್ರವನ್ನು ಅರ್ಪಿಸಲಾಗಿದೆ. ಡಾ. ಪ್ರಣವಾನಂದ ರಾವ್ ಮಹಾಸ್ವಾಮೀಜಿ ನೇತೃತ್ವದ ಕೋರ್ ಕಮಿಟಿಯ ಏಳು ಮಂದಿ ಸದಸ್ಯರು ಶುಕ್ರವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಈ ಪತ್ರವನ್ನು ಹಸ್ತಾಂತರಿಸಿದರು. ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಷಡ್ಯಂತ್ರ ರೂಪಿಸಿ, ಜಾಗತಿಕ ಮಟ್ಟದಲ್ಲಿ ಅಪಪ್ರಚಾರ ಮತ್ತು ವದಂತಿಗಳನ್ನು ಹಬ್ಬಿಸಿ ಕಳಂಕ ತರಲು ಯತ್ನಿಸಿರುವ ಪ್ರಕರಣವನ್ನು ಮಹಾಸಭಾ ತೀವ್ರವಾಗಿ ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಜೂನ್ 27 ಮತ್ತು 28ರಂದು ಕಲಬುರಗಿಯಲ್ಲಿ ನಡೆದಿದ್ದ ಚಿಂತನಾ ಸಭೆಯ ನಿರ್ಧಾರದಂತೆ, ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಮತ್ತು ಕಳಂಕ ನಿವಾರಣೆಗೆ ಮಹಾಸಭಾ ತನ್ನ ಪೂರ್ಣ ಬೆಂಬಲವನ್ನು ಘೋಷಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಣವಾನಂದ ರಾವ್ ಸ್ವಾಮೀಜಿ, ಷಡ್ಯಂತ್ರ ರೂಪಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಲು ಸದ್ಯದಲ್ಲೇ ರಾಜ್ಯದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೆ, ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗಾಗಿ ಸುಮಾರು ಇನ್ನೂರು ಮಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಈ ಕುರಿತು ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು. ಭೇಟಿಯ ವೇಳೆ ಪೂಜ್ಯ ಹೆಗ್ಗಡೆಯವರಿಗೆ ದೇವರು ಪೂರ್ಣ ಆರೋಗ್ಯ ಭಾಗ್ಯ ನೀಡಿ, ಅವರ ಜನಪರ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಸ್ವಾಮೀಜಿಗಳು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಮಹಾಸಭಾದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು. ನಂತರ ಮಠಾಧೀಶರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.