ಮೂಡುಬಿದಿರೆ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೇವಲ ಹೊಸ ಕಲ್ಪನೆಗಳಿದ್ದರೆ ಸಾಲದು, ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮರ್ಥ ತಂತ್ರ, ನಿರಂತರ ಪ್ರಯತ್ನ ಹಾಗೂ ಶಿಸ್ತು ಅಗತ್ಯ ಎಂದು ಖ್ಯಾತ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಹಾಗೂ ಮಾಸ್ಟರ್‌ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ವೇಣು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ ಆಯೋಜಿಸಿದ್ದ ‘ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ಬಗೆ’ ಕುರಿತ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಯೋಜನೆ, ನಿರಂತರ ಸುಧಾರಣೆ ಹಾಗೂ ಶಿಸ್ತಿನ ಕಾರ್ಯಪದ್ಧತಿ ಸಂಸ್ಥೆಯ ಬೆಳವಣಿಗೆಗೆ ಬಲವಾದ ಅಡಿಪಾಯವಾಗುತ್ತದೆ ಎಂದು ಅವರು ತಿಳಿಸಿದರು. ಇದೇ ವೇಳೆ ಕೃತಕ ಬುದ್ಧಿಮತ್ತೆ (ಎಐ) ಕುರಿತ ಆತಂಕಗಳನ್ನು ದೂರಾಗಿಸಿದ ಅವರು, ಕಂಪ್ಯೂಟರ್, ಮೊಬೈಲ್ ಹಾಗೂ ಕೈಗಾರಿಕೀಕರಣ ಬಂದಾಗಲೂ ಉದ್ಯೋಗ ನಷ್ಟದ ಭೀತಿ ಇತ್ತು. ಆದರೆ ಪ್ರತಿಯೊಂದು ಹೊಸ ತಂತ್ರಜ್ಞಾನವೂ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಎಐ ಉದ್ಯೋಗಗಳನ್ನು ಕಸಿದುಕೊಳ್ಳುವ ಬದಲು ಕೆಲಸದ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲಿದೆ ಎಂದರು.
ವಿಶೇಷವಾಗಿ ಎಂಬಿಎ ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗದೆ, ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದ ಅವರು, ಸಮರ್ಥ ನಾಯಕನಿಗೆ ವಿಶ್ಲೇಷಣಾತ್ಮಕ ಚಿಂತನೆ, ದೂರದೃಷ್ಟಿ ಹಾಗೂ ನಿರಂತರ ಕಲಿಕೆಯ ಹಂಬಲ ಅಗತ್ಯ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾಸ್ಟರ್‌ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ಆಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವೇಣು ಶರ್ಮಾರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು. ಹೃಷಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಅಮಾನ್ ಕಾರ್ಯಕ್ರಮ ಸಂಯೋಜಿಸಿದರು.