ಬಂಟ್ವಾಳ : ಸರ್ಕಾರಕ್ಕೆ ಮುಟ್ಟುಗೋಲು ಹಾಕಲಾಗಿರುವ ಒಟ್ಟು 579-65 ಕೆ.ಜಿ ಬೆಳ್ತಿಗೆ ಪಡಿತರ ಅಕ್ಕಿ ಹಾಗೂ 99-73 ಕೆ.ಜಿ ಪಡಿತರ ಕುಚ್ಚಲಕ್ಕಿಯನ್ನು ಬಹಿರಂಗ ಹರಾಜಿನ (ಏಲಂ) ಮೂಲಕ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಆಸಕ್ತಿಯುಳ್ಳ ಸಾರ್ವಜನಿಕರು ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ವಿಟ್ಲದ ಲ್ಯಾಂಪ್ ಸಹಕಾರ ಸಂಘದ ನಿಯಮಿತ ಬಂಟ್ವಾಳ ಶಾಖೆಯಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ-103ರಲ್ಲಿ ಭಾಗವಹಿಸಬಹುದಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಹರಾಜು ಆರಂಭವಾಗುವ ಮುನ್ನ ಸ್ಥಳದಲ್ಲಿಯೇ 1,500 ರೂಪಾಯಿ ಮುಂಗಡ ಠೇವಣಿಯನ್ನು ನಗದಾಗಿ ಪಾವತಿಸಿ ರಸೀದಿ ಪಡೆಯಬೇಕು ಹಾಗೂ ತಮ್ಮ ಆಧಾರ್ ಕಾರ್ಡ್‌ನ ನಕಲು ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿರುತ್ತದೆ. ಮುಂಗಡ ಠೇವಣಿ ಪಾವತಿಸಿದವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಹರಾಜಾಗುವ ಅಕ್ಕಿಯನ್ನು ಅದು ಪ್ರಸ್ತುತ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಯಶಸ್ವಿ ಏಲಂದಾರರು ಹರಾಜು ಖಾಯಂಗೊಂಡ ಮೂರು ಕಚೇರಿ ದಿನಗಳ ಒಳಗಾಗಿ ಮುಂಗಡ ಹಣವನ್ನು ಕಳೆದು ಉಳಿದ ಸಂಪೂರ್ಣ ಮೊತ್ತವನ್ನು ಹಾಗೂ ಸಂಬಂಧಪಟ್ಟ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಣ ಪಾವತಿಸಿದ ತಕ್ಷಣವೇ ಸ್ವಂತ ಖರ್ಚಿನಲ್ಲಿ ಅಕ್ಕಿಯನ್ನು ಸ್ಥಳದಿಂದ ಸಾಗಿಸಬೇಕು. ಈ ಇಡೀ ಪ್ರಕ್ರಿಯೆಯನ್ನು ನಡೆಸಲು ಬಂಟ್ವಾಳ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರರನ್ನು ಹರಾಜು ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.