ಮಂಗಳೂರು: ಮಜಿಲ ಸೂಟರ್‌ಪೇಟೆಯಲ್ಲಿರುವ ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಶ್ರೀ ದೈವರಾಜ ಬಬ್ಬುಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇದರ ಅಂಗವಾಗಿ ಜುಲೈ 12, 2026ರ ಭಾನುವಾರದಂದು ಬೆಳಿಗ್ಗೆ 9:00 ಗಂಟೆಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಭವ್ಯ ಶಿಲಾನ್ಯಾಸ ಕಾರ್ಯಕ್ರಮವು ನೆರವೇರಲಿದೆ ಎಂದು ಆಡಳಿತ ಸಮಿತಿ ಅದ್ಯಕ್ಷ ರಮೇಶ್ ಕೋಟ್ಯಾನ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಶ್ರೀ ದೈವರಾಜ ಬಬ್ಬುಸ್ವಾಮಿ ಸೇವಾ ಸಮಿತಿ (ರಿ.) ಮಜಿಲ, ಸೂಟರ್‌ಪೇಟೆ, ಮಂಗಳೂರು ಇವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಅಡಿಗ ರವರ ಪೌರೋಹಿತ್ಯದಲ್ಲಿ ಶಿಲಾನ್ಯಾಸದ ವಿಧಿವಿಧಾನಗಳು ಜರುಗಲಿವೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಅವರ ಘನ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು, ಊರ ಹತ್ತು ಸಮಸ್ತರ ಹಾಗೂ ದೇಶ-ವಿದೇಶಗಳ ಭಕ್ತಾದಿಗಳ ಸಹಕಾರದೊಂದಿಗೆ ಈ ಪುಣ್ಯ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಶತಮಾನಗಳ ಇತಿಹಾಸವಿರುವ ಈ ಪವಿತ್ರ ದೈವಸ್ಥಾನವು ಸದ್ಯ ಶಿಥಿಲಾವಸ್ಥೆಗೆ ತಲುಪಿದ್ದು, ದೈವದ ಅಪ್ಪಣೆಯಂತೆ ಹಾಗೂ ಮಜಿಲ ಗ್ರಾಮಸ್ಥರ ತೀರ್ಮಾನದಂತೆ ಪುನರ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಮಹತ್ಕಾರ್ಯಕ್ಕೆ ಅಂದಾಜು 1 ಕೋಟಿ 36 ಲಕ್ಷ ರೂಪಾಯಿ ವೆಚ್ಚದ ಪಟ್ಟಿಯನ್ನು ತಯಾರಿಸಲಾಗಿದ್ದು, ಗರ್ಭಗುಡಿ ಹಾಗೂ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯಗಳು ಈ ಯೋಜನೆಯಲ್ಲಿ ಒಳಗೊಂಡಿವೆ. ಈ ಹಿಂದೆ ನಮ್ಮ ಪೂರ್ವಜರ ಕಾಲದಿಂದಲೂ ಸುಮಾರು 3 ಬಾರಿ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಹಿರಿಯ ಅರ್ಚಕರಾದ ಶ್ರೀ ವೆಂಕಪ್ಪ ಪಾತ್ರಿ ಅವರು ಈ ಎಲ್ಲಾ ಸೇವೆಗಳನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿರುತ್ತಾರೆ. ಪ್ರಸ್ತುತ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ, ಗೌರವಾಧ್ಯಕ್ಷರಾದ ಶ್ರೀ ಪ್ರವೀಣ್ ಮಚ್ಚೇಂದ್ರನಾಥ್ ಬಾಬು, ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್ ಕೋಟ್ಯಾನ್, ಪ್ರಧಾನ ಅರ್ಚಕ ಶ್ರೀ ವೆಂಕಪ್ಪ ಪಾತ್ರಿ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ಸೀತಾರಾಮ ಕೊಡಿಕ್ಕಾಲ್ ಹಾಗೂ ಎಸ್‌ಬಿಐ ಡೆಪ್ಯುಟಿ ಮ್ಯಾನೇಜರ್ ಶ್ರೀ ಅನಂತ್ ಮಂಗಳ್ ಸೇರಿದಂತೆ ಊರಿನ ಗಣ್ಯರು ಜೀರ್ಣೋದ್ಧಾರ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಪವಿತ್ರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಊರ ಪರವೂರ ಭಕ್ತ ಮಹಾಶಯರು, ಸಂಘ ಸಂಸ್ಥೆಗಳು ಹಾಗೂ ಉದಾರಿ ದಾನಿಗಳು ತನು-ಮನ-ಧನಗಳಿಂದ ಸಹಕರಿಸಿ, ಪುನರ್ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕಾಗಿ ಶ್ರೀ ದೈವರಾಜ ಬಬ್ಬುಸ್ವಾಮಿ ಸೇವಾ ಸಮಿತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದೆ. ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ದೇಣಿಗೆ ನೀಡ ಬಯಸುವ ಭಕ್ತರಿಗಾಗಿ ಬ್ಯಾಂಕ್ ಖಾತೆಯ ವಿವರಗಳನ್ನು ಪ್ರಕಟಿಸಲಾಗಿದ್ದು, 'ಶ್ರೀ ಬಬ್ಬುಸ್ವಾಮಿ ಸೇವಾ ಸಮಿತಿ ಟ್ರಸ್ಟ್, ಕೆನರಾ ಬ್ಯಾಂಕ್, ಮಜಿಲ ಮಂಗಳೂರು ಶಾಖೆ, ಖಾತೆ ಸಂಖ್ಯೆ: 00000044815844760, ಐಎಫ್‌ಎಸ್‌ಸಿ ಕೋಡ್: SBIN0000871' ಕ್ಕೆ ಹಣವನ್ನು ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಪದಾಧಿಕಾರಿಗಳಾದ 8792659992, 9632403534 ಅಥವಾ 9902179411 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿನಂತಿಸದ್ದಾರೆ.