ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳಿಗೆ ಬರುವ ಗರ್ಭಿಣಿಯರ ವಯಸ್ಸನ್ನು ಕಡ್ಡಾಯವಾಗಿ ದೃಢಪಡಿಸಿಕೊಳ್ಳಬೇಕು ಮತ್ತು ಒಂದು ವೇಳೆ 18 ವರ್ಷದೊಳಗಿನ ಅಪ್ರಾಪ್ತ ಗರ್ಭಿಣಿಯರು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮಂಗಳವಾರ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಡಾ. ಅಮೃತಾ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಪಿಸಿಪಿಎನ್‌ಡಿಟಿ (PCPNDT) ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ದೀಪಾ ಪ್ರಭು ಅವರು ಮಾಹಿತಿ ನೀಡಿ, ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಜಿಲ್ಲೆಯ 681 ಖಾಸಗಿ ಹಾಗೂ 39 ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, 2026ರ ಏಪ್ರಿಲ್‌ನಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ 2,911 ಗಂಡು ಮತ್ತು 2,872 ಹೆಣ್ಣು ಮಕ್ಕಳು ಜನಿಸಿದ್ದು, ಲಿಂಗಾನುಪಾತವು 987 ರಷ್ಟಿದೆ ಎಂಬ ಅಂಕಿ-ಅಂಶಗಳನ್ನು ಹಂಚಿಕೊಳ್ಳಲಾಯಿತು. ಇದೇ ವೇಳೆ ಜಿಲ್ಲೆಯ ಪಶು ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕಡ್ಡಾಯವಾಗಿ "ಪ್ರಾಣಿಗಳಿಗೆ ಮಾತ್ರ ಸ್ಕ್ಯಾನ್" ಎಂಬ ಫಲಕವನ್ನು ಪ್ರದರ್ಶಿಸಬೇಕು ಹಾಗೂ ಮನುಷ್ಯರಿಗೆ ಸ್ಕ್ಯಾನ್ ಮಾಡುವುದಿಲ್ಲ ಎಂಬ ನೋಟರಿ ಅಫಿಡವಿಟ್ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಹೊಸ ಸ್ಕ್ಯಾನಿಂಗ್ ಉಪಕರಣಗಳ ಖರೀದಿ ಅರ್ಜಿಗಳ ಪರಿಶೀಲನೆ ನಡೆದ ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಅನಿತ್‍ರಾಜ್, ಡಾ. ಸುಂದರಿ, ಡಾ. ನಂಜೇಶ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.