ಮಂಗಳೂರು:- 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರು ಗೂಗಲ್ ಪ್ಲೇ ಸ್ಟೋರ್ ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ-2026-27” ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಒ.ಟಿ.ಪಿ. ಆಯ್ಕೆಯನ್ನು ಮಾಡಬೇಕು. ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗಿರುವ ಒ.ಟಿ.ಪಿ.ಯನ್ನು ಮೊಬೈಲ್ ತಂತ್ರಾಂಶದಲ್ಲಿ ದಾಖಲಿಸಬೇಕು.
ರೈತರ ಎಫ್.ಐ.ಡಿ. ಸಂಖ್ಯೆಗೆ ಜೋಡಣೆಯಾಗಿರುವ ಎಲ್ಲಾ ಜಮೀನುಗಳ ಮಾಹಿತಿಯು ಡೌನ್ಲೋಡ್ ಆಗುತ್ತದೆ. ಮುಂದಿನ ಹಂತದಲ್ಲಿ ಇತರೆ ಮಾಹಿತಿಗಳಾದ ಸರ್ವೆ ನಂಬರ್, ಹಿಸ್ಸಾ ನಂಬರ್, ಮಾಲೀಕನ ಹೆಸರು, ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಬೇಕು. ಸರ್ವೆ ನಂಬರ್ ಗಳ ಗಡಿ ರೇಖೆಯೊಳಗೆ ನಿಂತು ಬೆಳೆ ವಿವರವನ್ನು ದಾಖಲಿಸಿ ಪೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
ಒಂದು ವೇಳೆ ರೈತರು ಎಫ್.ಐ.ಡಿ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಹತ್ತಿರದ ಕೃಷಿ ಅಥವಾ ತೋಟಗಾರಿಕಾ ಇಲಾಖೆಗಳ ಕಛೇರಿಯನ್ನು ಸಂಪರ್ಕಿಸಿ ಎಫ್.ಐ.ಡಿ. ಮಾಡಿಸಿಕೊಳ್ಳಬಹುದು. ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಳೆ ವಿಮೆ ಯೋಜನೆಯ ಅನುಷ್ಠಾನ ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಕೃಷಿ/ತೋಟಗಾರಿಕೆ/ರೇಷ್ಮೆಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಮತ್ತು ರೈತರ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುತ್ತದೆ.
ಜಿಲ್ಲೆಯ ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಲ್ಲದೆ ನಿಗದಿತ ಅವಧಿಯೊಳಗೆ ಮೊಬೈಲ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಸರ್ವೆ ನಂಬರು ಬೆಳೆ ವಿವರವನ್ನು ತಾವೇ ಖುದ್ದಾಗಿ ನಿಖರವಾಗಿ ದಾಖಲಿಸಿ ಮುಂಗಾರು 2026-27 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.