image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಪಾಲಿಕೆ ಹಾಗೂ ಮುಡಾ ಅವ್ಯವಸ್ಥೆಯ ಆಗರ: ಶಾಸಕ ವೇದವ್ಯಾಸ್ ಕಾಮತ್ ಖಂಡನೆ

ಮಂಗಳೂರು ಪಾಲಿಕೆ ಹಾಗೂ ಮುಡಾ ಅವ್ಯವಸ್ಥೆಯ ಆಗರ: ಶಾಸಕ ವೇದವ್ಯಾಸ್ ಕಾಮತ್ ಖಂಡನೆ

ಮಂಗಳೂರು: ರಾಜ್ಯ ಸರ್ಕಾರದ ಅವಿವೇಕದ ಹಾಗೂ ಸಮನ್ವಯ ರಹಿತ ನಿರ್ಧಾರಗಳಿಂದಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ನಾಗರಿಕ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಜನಸಾಮಾನ್ಯರು ತಮ್ಮ ಹಕ್ಕುಗಳಾದ ಜನನ-ಮರಣ ಪ್ರಮಾಣಪತ್ರಗಳು ಹಾಗೂ ಭೂಪರಿವರ್ತನೆ (ಕನ್ವರ್ಷನ್) ದಾಖಲೆಗಳಿಗಾಗಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ದಿಢೀರನೆ 'ಎಸ್ಐಆರ್' ಕರ್ತವ್ಯಕ್ಕೆ ನಿಯೋಜಿಸಿರುವ ಕಾರಣ, ಪಾಲಿಕೆಯ ಜನನ ಮತ್ತು ಮರಣಗಳ ನೋಂದಣಿ ಘಟಕದಲ್ಲಿ “ಮುಂದಿನ ಒಂದು ತಿಂಗಳು ಅರ್ಜಿ ಸ್ವೀಕಾರ ಇರುವುದಿಲ್ಲ” ಎಂಬ ಫಲಕವನ್ನು ಪ್ರದರ್ಶಿಸಲಾಗಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರಸ್ತುತ ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪೋಷಕರಿಗೆ ಜನನ ಪ್ರಮಾಣಪತ್ರ ಅತ್ಯಂತ ತುರ್ತಾಗಿ ಬೇಕಾಗಿದೆ. ಅತ್ತ ಪಾಸ್‌ಪೋರ್ಟ್ ಸೇರಿದಂತೆ ಇತರೆ ಕಾನೂನಾತ್ಮಕ ಕೆಲಸಗಳಿಗೆ ದಿನಗಣನೆ ನಡೆಸುತ್ತಿರುವ ನಾಗರಿಕರು ಸರ್ಕಾರದ ಈ ಧೋರಣೆಯಿಂದ ಕಂಗಾಲಾಗಿದ್ದಾರೆ. ಆಡಳಿತಾಧಿಕಾರಿಗಳ ಮೂಲಕ ಪಾಲಿಕೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಕಷ್ಟಗಳ ಅರಿವಿಲ್ಲವೇ ಎಂದು ಪ್ರಶ್ನಿಸಿದ ಮುಖಂಡರು, ಸಾರ್ವಜನಿಕರು ತೀವ್ರವಾಗಿ ಪ್ರತಿಭಟಿಸಿ ಶಾಸಕರಿಗೆ ದೂರು ನೀಡಲು ಮುಂದಾದ ಕಾರಣ ನಿನ್ನೆಯಿಂದ ಕೇವಲ ಅರ್ಜಿಗಳನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ, "ಪ್ರಮಾಣಪತ್ರಕ್ಕಾಗಿ ತುರ್ತು ಮಾಡುವಂತಿಲ್ಲ" ಎಂಬ ಕಠಿಣ ಷರತ್ತನ್ನು ವಿಧಿಸಲಾಗುತ್ತಿದೆ. ನಾಗರಿಕರಿಂದ ದಿನನಿತ್ಯ ತೆರಿಗೆ ವಸೂಲಿ ಮಾಡುವ ಪಾಲಿಕೆಯು, ಸೇವೆಗಳನ್ನು ನೀಡುವಲ್ಲಿ ಈ ರೀತಿಯ ಉದಾಸೀನತೆ ತೋರುತ್ತಿರುವುದು ಖಂಡನೀಯ. ಪಾಲಿಕೆಯ ಮುಂದೆ ನಿತ್ಯ ಸಾಲುಗಟ್ಟಿ ನಿಲ್ಲುವ ಜನಸಾಮಾನ್ಯರು ಹಾಗೂ ಕಚೇರಿ ಸಿಬ್ಬಂದಿ ನಡುವೆ ಅನಗತ್ಯ ಮಾತಿನ ಚಕಮಕಿಗಳು ನಡೆಯುತ್ತಿದ್ದು, ಈ ಗೊಂದಲಕ್ಕೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

​ಮತ್ತೊಂದೆಡೆ ಮಂಗಳೂರು ನಗರದಲ್ಲಿ ಭೂಪರಿವರ್ತನೆ ಪ್ರಕ್ರಿಯೆಯು ಸದ್ಯಕ್ಕೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿಂದೆ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಲಭವಾಗಿ ನಡೆಯುತ್ತಿದ್ದ ಭೂಪರಿವರ್ತನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಯಾವುದೇ ಮುನ್ನಾಲೋಚನೆ ಇಲ್ಲದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವಹಿಸಿಕೊಟ್ಟಿದೆ. ಈ ವರ್ಗಾವಣೆಯು ಪರ್ಯಾಯ ವ್ಯವಸ್ಥೆಗಳಿಲ್ಲದೆ ನಡೆದಿರುವುದರಿಂದ ಸಾರ್ವಜನಿಕರು ತೀವ್ರ ಅಸಹಾಯಕರಾಗಿದ್ದಾರೆ. ಹಿಂದೆ ಕಂದಾಯ ಇಲಾೆಯ ಸರ್ವೇಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ನಕ್ಷೆ (ಮ್ಯಾಪ್) ಸಿದ್ಧಪಡಿಸಿಕೊಡುತ್ತಿದ್ದರು. ಆದರೆ ಈಗ ಭೂಪರಿವರ್ತನೆಗೆ ಅಗತ್ಯವಿರುವ ಸರ್ವೇಯರ್‌ಗಳು ಮತ್ತು ಮೂಲ ದಾಖಲೆಗಳು ಕಂದಾಯ ಇಲಾೆಯಲ್ಲೇ ಉಳಿದುಕೊಂಡಿವೆ. ಮುಡಾ ಅಧಿಕಾರಿಗಳು ನಕ್ಷೆ ಇಲ್ಲದೆ ಕನ್ವರ್ಷನ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರೆ, ಕಂದಾಯ ಇಲಾೆಯವರು ಸರ್ಕಾರದ ಆದೇಶದನ್ವಯ ನಮಗೆ ನಕ್ಷೆ ನೀಡಲು ಅಧಿಕಾರವಿಲ್ಲ ಎಂದು ಕೈತೊಳೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ತುರ್ತು ಅಗತ್ಯಗಳಿಗಾಗಿ ಸೈಟ್ ಅಥವಾ ಜಮೀನು ಮಾರಾಟ ಮಾಡಲು ಬಯಸುವ ಮಾಲೀಕರು ಹಾಗೂ ಖರೀದಿದಾರರು ಮಧ್ಯೆ ಸಿಲುಕಿ ಒದ್ದಾಡುವಂತಾಗಿದೆ. ಇದಲ್ಲದೆ ಸಿಬ್ಬಂದಿ ಕೊರತೆಯಿಂದಾಗಿ ಮುಡಾದ ದೈನಂದಿನ ಕೆಲಸಗಳೇ ವಿಳಂಬವಾಗುತ್ತಿವೆ.

​ಸರ್ಕಾರದ ಇಂತಹ ಗೊಂದಲಕಾರಿ ನಿರ್ಧಾರಗಳಿಂದಾಗಿ ಕರಾವಳಿಯ ಜನರಿಗೆ ಅತ್ಯಂತ ಸುಲಭವಾಗಿ ಸಿಗಬೇಕಿದ್ದ ಪ್ರಾಪರ್ಟಿ ಕಾರ್ಡ್, ಆರ್‌ಟಿಸಿ ಮತ್ತು ಕನ್ವರ್ಷನ್ ದಾಖಲೆಗಳು ತಿಂಗಳುಗಟ್ಟಲೆ ಅಲೆದಾಡಿದರೂ ಸಿಗದಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಸಮಯ 'ಸರ್ವರ್ ಡೌನ್' ಸಮಸ್ಯೆ ಇರುತ್ತದೆ, ಇಲ್ಲವೇ ಇನ್ಯಾವುದೋ ತಾಂತ್ರಿಕ ದೋಷದ ನೆಪ ಹೇಳಿ ಸಾರ್ವಜನಿಕರನ್ನು ಸತಾಯಿಸಲಾಗುತ್ತಿದೆ. ನಾಗರಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಕಂದಾಯ ಇಲಾಖೆ ಹಾಗೂ ಮುಡಾ ನಡುವಿನ ಗೊಂದಲಗಳನ್ನು ಬಗೆಹರಿಸಿ ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕೆಂದು  ಒತ್ತಾಯ ಹೇರಿದ್ದಾರೆ.

​ಈ ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಡಲದ ಪದಾಧಿಕಾರಿ ಮಂಗಳಾ ಆಚಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ