image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಜುಲೈ 10 ರಿಂದ ‘ಯಕ್ಷರಂಗ’ ಇಂಗ್ಲಿಷ್ ಯಕ್ಷಗಾನ ಬಳಗದ ರಜತ ಮಹೋತ್ಸವದ ಅದ್ಧೂರಿ ಸಂಭ್ರಮ

ಮಂಗಳೂರಿನಲ್ಲಿ ಜುಲೈ 10 ರಿಂದ ‘ಯಕ್ಷರಂಗ’ ಇಂಗ್ಲಿಷ್ ಯಕ್ಷಗಾನ ಬಳಗದ ರಜತ ಮಹೋತ್ಸವದ ಅದ್ಧೂರಿ ಸಂಭ್ರಮ

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕಲೆ ಮತ್ತು ಭವ್ಯ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿರುವ ಯಕ್ಷಗಾನವನ್ನು ಇಂಗ್ಲಿಷ್ ಭಾಷೆಯ ಮಾಧ್ಯಮದ ಮೂಲಕ ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಹೊತ್ತ ಮಂಗಳೂರಿನ ಪ್ರಸಿದ್ಧ ಸಂಸ್ಥೆ ‘ಯಕ್ಷರಂಗ’ (ಎ.ಐ. ಆರ್ಚ್ ಇಂಗ್ಲಿಷ್ ಯಕ್ಷಗಾನ ಬಳಗ) ಇದೀಗ ಯಶಸ್ವೀ 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಶ್ರೀ ಪಿ ಸಂತೋಷ್ ಐತಾಳ  ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ಸಂಸ್ಥೆಯು ಇದೇ ಜುಲೈ 10ನೇ ಶುಕ್ರವಾರದಂದು ಸಂಜೆ 5:00 ಗಂಟೆಗೆ ನಗರದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇಂಗ್ಲಿಷ್ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾ ಸೇವೆಯಲ್ಲಿ ನಿರತವಾಗಿರುವ ‘ಯಕ್ಷರಂಗ’ ಸಂಸ್ಥೆಯು, ಭಾಷೆಯ ಗಡಿಗಳನ್ನು ಮೀರಿ ಯಕ್ಷಗಾನದ ಗತ್ತು, ನಡೆ ಮತ್ತು ಹಿಮ್ಮೇಳದ ಸೊಗಡನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಸಿದ್ಧ ಕಲಾ ಮಾರ್ಗದರ್ಶಕರು ಹಾಗೂ ಸಾಮಾಜಿಕ ಮುಖಂಡರಾದ ಡಾ. ಬಿ. ಬಿ. ಆಚಾರ್ಯ ಮತ್ತು ಪ್ರಾಧ್ಯಾಪಕರಾದ ಬಿ. ಎಂ. ಆಚಾರ್ಯ ಅವರ ಸುದೀರ್ಘ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಈ ಬಳಗವು ಬೆಳೆದು ಬಂದಿದೆ. ಕರಾವಳಿಯ ಈ ಸಾಂಸ್ಕೃತಿಕ ಪರಂಪರೆಯನ್ನು ಇಂಗ್ಲಿಷ್ ಭಾಷೆಯ ಮೂಲಕ ಪ್ರಸ್ತುತಪಡಿಸುವ ಇವರ ಪ್ರಯತ್ನವು ದೇಶ-ವಿದೇಶಗಳ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದೆ.
ಜುಲೈ 10 ರಂದು ಆಯೋಜಿಸಲಾಗಿರುವ ಈ ರಜತ ಮಹೋತ್ಸವದ ವೇದಿಕೆಯು ಸಾಂಸ್ಕೃತಿಕ ಗಣ್ಯರ ಮಿಲನಕ್ಕೆ ಸಾಕ್ಷಿಯಾಗಲಿದೆ. ಸಮಾರಂಭದಲ್ಲಿ ಕಲಾ ಕ್ಷೇತ್ರದ ಸಾಧಕರಿಗೆ ಗೌರವ ಸತ್ಕಾರ ಹಾಗೂ ಗಣ್ಯರಿಂದ ವಿಶೇಷ ಉಪನ್ಯಾಸಗಳು ನಡೆಯಲಿವೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂಸ್ಥೆಯ ಕಲಾವಿದರಿಂದ ಅದ್ಧೂರಿ ‘ಇಂಗ್ಲಿಷ್ ಯಕ್ಷಗಾನ ಪ್ರಸಂಗ’ ಪ್ರದರ್ಶನಗೊಳ್ಳಲಿದ್ದು, ಇದು ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬವಾಗಲಿದೆ. ಕಳೆದ 25 ವರ್ಷಗಳಿಂದ ಯಕ್ಷಗಾನ ಕಲೆಯ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರೇಕ್ಷಕರ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆಯಾಗಿದೆ. ಈ ರಜತ ಮಹೋತ್ಸವದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕರಾವಳಿಯ ಸಮಸ್ತ ಕಲಾಭಿಮಾನಿಗಳು ಯಶಸ್ವಿಗೊಳಿಸಬೇಕು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ರವಿ ಅಲೆವುರಾಯ ವರ್ಕಾಡಿ, ಶಿವತೇಜ ಐತಾಳ ಮತ್ತು ಶರತ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ