ಬೆಂಗಳೂರು : ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲಿಸಿರುವ ತೇಜಸ್ ಗೌಡ ಅವರ ಮೇಲೆ ಕೇಸ್ ವಾಪಸ್ ಪಡೆಯುವಂತೆ ಪೊಲೀಸರ ಮೂಲಕ ಬೆದರಿಕೆ ಹಾಕುತ್ತಿರುವುದು ಮತ್ತು ಅವರ ವೈಯಕ್ತಿಕ ಮಾಹಿತಿ ಕಲೆಹಾಕುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಆಪಾದಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೂ ನನ್ನನ್ನು ಪ್ರಶ್ನಿಸಬಾರದು ಎನ್ನುವ ಗೃಹ ಸಚಿವರ ಧೋರಣೆ ಸರಿಯಲ್ಲ, ಬೆದರಿಕೆಗೆ ಹೆದರಿ ಯಾರೂ ಪ್ರಕರಣ ದಾಖಲಿಸುವುದಿಲ್ಲ ಎಂದರು. ಆರ್‌ಎಸ್‌ಎಸ್ ಯಾವಾಗಲೂ ಅನುಮತಿ ಪಡೆದೇ ಪಥ ಸಂಚಲನ ನಡೆಸುತ್ತದೆ, ಪ್ರಿಯಾಂಕ್ ಖರ್ಗೆಯವರಿಗೆ ಅಧ್ಯಯನದ ಕೊರತೆಯಿರುವುದರಿಂದ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಗೃಹ ಸಚಿವರು ಮೊದಲು ಕಾನೂನು ಸುವ್ಯವಸ್ಥೆ ಕಾಪಾಡುವುದು, ದರೋಡೆ ಮತ್ತು ಅತ್ಯಾಚಾರಗಳನ್ನು ತಡೆಯುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಅಯೋಧ್ಯೆ ದೇಣಿಗೆ ದುರುಪಯೋಗದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದ್ದು, ತಪ್ಪು ಮಾಡಿದವರಿಗೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಶಿಕ್ಷೆ ಖಂಡಿತ ಎಂದ ರವಿ ಅವರು, ಕರ್ನಾಟಕ ಸರ್ಕಾರ ವಕ್ಸ್ ಲೂಟಿಯ ಕುರಿತು ಏಕೆ ಎಸ್‌ಐಟಿ ರಚಿಸುತ್ತಿಲ್ಲ, ತನಿಖೆ ನಡೆಸಿದರೆ ಅರ್ಧ ಕಾಂಗ್ರೆಸಿಗರು ಸಿಕ್ಕಿಬೀಳುತ್ತಾರೆ ಎಂಬ ಭಯವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಕ್ರಮವಾಗಿ ಮತದಾರರ ಅರ್ಜಿ ತುಂಬುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಬಿಎಲ್‌ಒಗಳು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮನೆ ಮನೆಗೆ ತೆರಳಿ ಕೆಲಸ ಮಾಡಬೇಕೇ ಹೊರತು ಕಾಂಗ್ರೆಸ್ ಹೇಳಿದಂತಲ್ಲ; ಈ ಅಕ್ರಮದ ಕುರಿತು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು. ಇನ್ನು ದೇವರಾಜ್ ಅರಸು ನಿಗಮದಲ್ಲಿ ಮಾರುಕಟ್ಟೆಯಲ್ಲಿ 7 ರಿಂದ 10 ಸಾವಿರಕ್ಕೆ ಸಿಗುವ ಹೊಲಿಗೆ ಯಂತ್ರಕ್ಕೆ 17,000 ರೂಪಾಯಿ ಟೆಂಡರ್ ನೀಡಿ ಲೂಟಿ ಹೊಡೆಯಲಾಗುತ್ತಿದೆ ಮತ್ತು ಕಾರ್ಮಿಕ ಇಲಾಖೆಯಲ್ಲಿ 900 ರೂ. ಕಿಟ್‌ಗೆ 5,000 ರೂ. ಬೆಲೆ ಹಾಕಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, 10 ರೂಪಾಯಿ ಲಂಚ ಪಡೆಯಬಾರದು ಎನ್ನುವ ಮುಖ್ಯಮಂತ್ರಿಗಳು ಈ ಹಗಲು ದರೋಡೆಯ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.