ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯಾ ಹಾಗೂ ಪನ್ನೀರು ವಾರ್ಡ್‌ಗಳಲ್ಲಿ ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಅವರು ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರೊಂದಿಗೆ ತುರ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಮುಖ್ಯವಾಗಿ ಐದು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಶರೀಫ್ ಕನ್ಸಕ್ಷನ್ ಸಂಸ್ಥೆಯ ಪ್ರಗತಿಯನ್ನು ವಿಶೇಷವಾಗಿ ಪರಿಶೀಲಿಸಲಾಯಿತು. ರಸ್ತೆಗಳನ್ನು ಅಗೆದು ದೀರ್ಘಕಾಲ ಹಾಗೆಯೇ ಬಿಡುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಐವನ್ ಡಿ'ಸೋಜಾ ಅವರು ಎಚ್ಚರಿಸಿದರು. ಇನ್ನೂ ಆರಂಭವಾಗದಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಮತ್ತು ಈಗಾಗಲೇ ಅಗೆದಿರುವ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡದೆ, ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಆದೇಶಿಸಲಾಯಿತು. ಈ ಮಹತ್ವದ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್, ಜೂನಿಯರ್ ಇಂಜಿನಿಯರ್ ಸೈದಾ, ಗುತ್ತಿಗೆದಾರರಾದ ಇನ್ಸಾಲ್, ಇಟ್ಬಾಲ್ ಹಾಗೂ ಸ್ಥಳೀಯ ಮುಖಂಡರಾದ ಅಶೋಕ್ ಮೆಂಡೋನ್ಸಾ, ಡ್ರೈವ್ ಸಾಂಸನ್ ಮತ್ತು ಅನಿಲ್ ಲೋಬೋ ಉಪಸ್ಥಿತರಿದ್ದರು.