ಮಂಗಳೂರು : ಎಂಆರ್‌ಪಿಎಲ್ ಹಾಗೂ MSEZL ಕೈಗಾರಿಕೆಗಳ ಹಸಿರು ವಲಯ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಮಾಲಿನ್ಯ ಬಾಧಿತ ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನೂ ಸೇರಿಸಬೇಕೆಂದು ಆಗ್ರಹಿಸಿ ಸ್ಥಳೀಯ 105 ಕುಟುಂಬಗಳ ನಿವಾಸಿಗಳು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ. 2007ರಿಂದಲೂ ಕೈಗಾರಿಕಾ ಮಾಲಿನ್ಯದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸರ್ಕಾರ ಈವರೆಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅನಿಶ್ಚಿತತೆಯಲ್ಲೇ ಜೀವನ ಸಾಗಿಸುತ್ತಿರುವುದಾಗಿ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಕುರಿತು ತಕ್ಷಣ ಸ್ಪಂದಿಸಿದ ಐವನ್ ಡಿ'ಸೋಜಾ ಅವರು, ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು, ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ಸಮಸ್ಯೆಯನ್ನು ಪ್ರಸ್ತಾಪಿಸಿ ನ್ಯಾಯ ದೊರಕಿಸಿಕೊಡುವುದಾಗಿ ಶಾಸಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ ಸೇರಿದಂತೆ ಹಲವು ಸ್ಥಳೀಯ ಸಂತ್ರಸ್ತರು ಉಪಸ್ಥಿತರಿದ್ದರು.