image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸಂಜೆಯ ಯೋಗ ಶಿಬಿರ ಉದ್ಘಾಟನೆ

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸಂಜೆಯ ಯೋಗ ಶಿಬಿರ ಉದ್ಘಾಟನೆ

ಮಂಗಳೂರು: ಇಲ್ಲಿನ ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಜುಲೈ ತಿಂಗಳಿನ ಎರಡು ವಾರಗಳ ಕಾಲ ನಡೆಯಲಿರುವ ಸಂಜೆಯ 5 ಗಂಟೆಯ ಯೋಗ ಶಿಬಿರವನ್ನು ಮಠದ ಬಾಲಕಾಶ್ರಮದ ವಾರ್ಡನ್ ಸ್ವಾಮಿ ಯುಗೇಶಾನಂದಾಜೀ ಅವರು ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಪರಂಪರೆಯ ಅಮೂಲ್ಯ ಕಲೆಯಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ದಿನನಿತ್ಯದ ಒತ್ತಡಗಳ ನಡುವೆಯೂ ಮನಸ್ಸನ್ನು ನಿಯಂತ್ರಿಸಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು. ಧ್ಯಾನ ಮತ್ತು ಪ್ರಾಣಾಯಾಮದಿಂದ ದೇಹದ ಪ್ರತಿಯೊಂದು ಅಂಗಾಂಗಕ್ಕೂ ನವಚೈತನ್ಯ ದೊರೆತು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ವಿಕಸನಕ್ಕೆ ಯೋಗ ಸಹಕಾರಿಯಾಗುತ್ತದೆ. ಇದು ನರಮಂಡಲವನ್ನು ಚೈತನ್ಯಶೀಲಗೊಳಿಸಿ ತಾಳ್ಮೆ ಹಾಗೂ ಶಾಂತಿಯನ್ನು ಕರುಣಿಸುತ್ತದೆ ಎಂದು ಅವರು ಹೇಳಿದರು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಪ್ರಯೋಜನಗಳನ್ನು ವಿವರಿಸಿದರು. ಪತಂಜಲಿ ಮಹರ್ಷಿಗಳ ಯೋಗಶಾಸ್ತ್ರದ ಸೂತ್ರಗಳನ್ನು ಉಲ್ಲೇಖಿಸಿದ ಅವರು, ಯೋಗ ಎಂದರೆ ಏಕತೆ, ಸಾಮರಸ್ಯ ಮತ್ತು ಶಿಸ್ತು ಎಂದರ್ಥ. ಚಂಚಲ ಹಾಗೂ ಅಶುದ್ಧ ಮನಸ್ಸಿನಿಂದ ಯೋಗಾಭ್ಯಾಸ ಮಾಡಲು ಸಾಧ್ಯವಿಲ್ಲ. ನಿರಂತರ ಅಭ್ಯಾಸವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲದ ಕಾರಣ ಇಲ್ಲಿ ಶಿಸ್ತಿನ ಗುಣಮಟ್ಟ ಅತ್ಯಂತ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಈ ಶಿಬಿರದ ಯಶಸ್ಸಿಗೆ ಶ್ರೀ ದೇಲಂಪಾಡಿ ಅವರ ಶಿಷ್ಯರಾದ ಭಾರತಿ, ಕಾರ್ತಿಕ್, ತುಕಾರಾಮ, ಚಂದ್ರಹಾಸ ಬಾಳ, ಪ್ರೇಮ ಪದ್ಮಾವತಿ ಹಾಗೂ ವಿ. ಪ್ರೇಮ ಅವರು ಸಹಕರಿಸಿದರು. ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಸಾರ್ವಜನಿಕರು ಹೆಚ್ಚಿನ ವಿವರ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲಯವನ್ನು ದೂರವಾಣಿ ಸಂಖ್ಯೆ: 0824-2414412 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ