ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 41ನೇ ಸೆಂಟ್ರಲ್ ವಾರ್ಡ್‌ನಲ್ಲಿ ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದ್ದ ಮಹಾಮ್ಮಾಯ ದೇವಸ್ಥಾನದ ಹಿಂಬದಿಯ ಚರಂಡಿ ನಿರ್ಮಾಣ ಮತ್ತು ಗೌರಿಮಠ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, "ವಾರ್ಡ್‌ನ ನಾಗರಿಕರ ಬೇಡಿಕೆಯನ್ನು ಪರಿಗಣಿಸಿ, 60 ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಈ ಅಭಿವೃದ್ಧಿ ಕೆಲಸಗಳಿಗಾಗಿ ಮೀಸಲಿಡಲಾಗಿದೆ. ಚರಂಡಿ ಹಾಗೂ ರಸ್ತೆ ಕಾಮಗಾರಿಗಳನ್ನು ಅತ್ಯಂತ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು" ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮಾ, ಮಂಡಲದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ವಾರ್ಡ್‌ನ ಪ್ರಮುಖರಾದ ಮುರಳೀಧರ್ ನಾಯಕ್, ಪಿ.ಸಿ. ಗುರು, ಚಂದ್ರಕಾಂತ್ ನಾಯಕ್, ಮೋಹಿತ್, ಗಿರೀಶ್ ಕುಮಾರ್, ಪ್ರಮೋದ್ ಆಚಾರ್ಯ, ಗಣಪತಿ ಕಾಮತ್, ಗಣೇಶ್, ರಾಜಕೃಷ್ಣ, ವಿದ್ಯಾ, ಸುಜಿತ್, ಸೂರಜ್, ಭರತ್ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.