ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ವಾರ್ಷಿಕ ಅಂತರ್‌ತರಗತಿ ವೈವಿಧ್ಯಮಯ ಮನರಂಜನಾ ಸ್ಪರ್ಧೆ ‘ಟ್ಯಾಲೆಂಟ್ ಹ್ಯೂಸ್ 2026’ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರಸಿದ್ಧ ಶಾಸ್ತ್ರೀಯ ಗಾಯಕಿ ಹಾಗೂ ಯಕ್ಷಗಾನ ಕಲಾವಿದೆ,ಸರಕಾರಿ ಪದವಿಪೂರ್ವ ಕಾಲೇಜು ಮಣಿನಾಲ್ಕೂರು ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಶಾಲಿನಿ ಮೆಹಂದಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳನ್ನು ಸಾರ್ಥಕವಾಗಿ ಬಳಸಿಕೊಳ್ಳಬೇಕು ಹಾಗೂ ಮೊಬೈಲ್ ಮತ್ತು ತಂತ್ರಜ್ಞಾನವನ್ನು ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರಜ್ ಚಾರ್ಲ್ಸ್ ನ್ಯೂನಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .ವಿದ್ಯಾರ್ಥಿಗಳ ಉತ್ಸಾಹ, ಸೃಜನಶೀಲತೆ ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು.
ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಶ್ರೀಮತಿ ಅನಿತಾ ಲೋಬೊ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಶ್ರಾವ್ಯ ವಂದಿಸಿದರು.ಸಫಾನ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹಮ್ಮಿಕೊಂಡಿದ್ದ ಟ್ಯಾಲೆಂಟ್ ಹ್ಯೂಸ್ 2026 ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.