ಮಂಗಳೂರು : ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಇದೇ ಜುಲೈ 13ರ ಸೋಮವಾರದಂದು ವಿಶೇಷವಾದ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯದರ್ಶನ ಹಾಗೂ ರುದ್ರ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳಾದೇವಿಯ ರಮಾ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಅಂದು ಪೂರ್ವಾಹ್ನ 9:30 ರಿಂದ 1:00 ರವರೆಗೆ ಮತ್ತು ಅಪರಾಹ್ನ 4:30 ರಿಂದ 7:30 ರವರೆಗೆ ಸಾರ್ವಜನಿಕರಿಗೆ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಶಿವಪುರಾಣದ ಪ್ರಕಾರ ಚಂದ್ರದೇವನು ಭಗವಾನ್ ಶಂಕರನಿಗೆ ಭಕ್ತಿಯ ಸಂಕೇತವಾಗಿ ಮೂಲ ಸೋಮನಾಥ ದೇವಾಲಯವನ್ನು ನಿರ್ಮಿಸಿದ್ದನು. ಈ ದೇವಾಲಯದಲ್ಲಿದ್ದ ಮೂಲ ಶಿವಲಿಂಗವು ಗುರುತ್ವಾಕರ್ಷಣೆಯ ಶಕ್ತಿಯನ್ನು ಮೀರಿ, ನೆಲದಿಂದ ಎರಡು ಅಡಿ ಮೇಲೆ ತೇಲುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಘಜನಿ ಮೊಹಮ್ಮದನು ಈ ದೇವಾಲಯದ ಮೇಲೆ 17 ಬಾರಿ ದಾಳಿ ಮಾಡಿದಾಗ ಜ್ಯೋತಿರ್ಲಿಂಗವು ಧ್ವಂಸಗೊಂಡಿತ್ತು. ಆದರೆ, ಆ ಲಿಂಗದ ತುಂಡುಗಳನ್ನು ಕೆಲವು ಹಿಂದೂ ಭಕ್ತರು ತಮ್ಮ ಸುಪರ್ದಿಗೆ ತೆಗೆದುಕೊಂಡು ರಹಸ್ಯವಾಗಿ ಕಾಪಾಡಿಕೊಂಡು ಬಂದಿದ್ದರು.
ಅಂತಹ ವಿಶೇಷ ಭಕ್ತರಲ್ಲಿ ಅಗ್ನಿಹೋತ್ರಿ ವಂಶಸ್ಥರಾದ ಶಾಸ್ತ್ರಿ ಕುಟುಂಬದವರು ಈ ತುಂಡುಗಳನ್ನು ಲಿಂಗದ ರೂಪದಲ್ಲಿ ಮಾರ್ಪಡಿಸಿ ಪೂಜಿಸುತ್ತಾ ರಕ್ಷಿಸಿದ್ದರು. 1924ರಲ್ಲಿ ಈ ಲಿಂಗಗಳನ್ನು ಕಂಚಿ ಶ್ರೀಗಳಿಗೆ ತೋರಿಸಿದಾಗ, ಇದರ ವಿಶೇಷತೆಯನ್ನು ಗುರುತಿಸಿದ ಅವರು, ಮತ್ತೊಂದು ನೂರು ವರ್ಷ ಇವುಗಳನ್ನು ಗುಪ್ತವಾಗಿ ಪೂಜಿಸುವಂತೆ ತಿಳಿಸಿದ್ದರು. ಅದರಂತೆ ಶಾಸ್ತ್ರಿ ಮನೆತನದ ಇತ್ತೀಚಿನ ವಾರಸುದಾರರಾದ ಶ್ರೀ ಸೀತಾರಾಮಶಾಸ್ತ್ರಿಗಳು ಪ್ರಸ್ತುತ ಕಂಚಿಶ್ರೀಗಳನ್ನು ಸಂಪರ್ಕಿಸಿದಾಗ, ಅವರು ಈ ಪವಿತ್ರ ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಹಸ್ತಾಂತರಿಸಲು ಸೂಚಿಸಿದರು. ಸದ್ಯ ಗುರೂಜಿಯವರ ಪ್ರಯತ್ನದಿಂದಾಗಿ ಸುಮಾರು 1000 ವರ್ಷಗಳ ನಂತರ ಈ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವು ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗುತ್ತಿದ್ದು, ಮಂಗಳೂರಿನ ಜನತೆಗೆ ಜೀವನದಲ್ಲೊಮ್ಮೆ ಸಿಗುವ ಈ ಅಪೂರ್ವ ಅವಕಾಶದ ಸದುಪಯೋಗ ಪಡಿಸಿಕೊಂಡು ಸೋಮನಾಥೇಶ್ವರನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.