image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಟ್ರೇಲರ್ ಅನಾಹುತ: ನಿಯಮ ಉಲ್ಲಂಘಿಸಿದ ಸಾರಿಗೆ ಸಂಸ್ಥೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲು

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಟ್ರೇಲರ್ ಅನಾಹುತ: ನಿಯಮ ಉಲ್ಲಂಘಿಸಿದ ಸಾರಿಗೆ ಸಂಸ್ಥೆ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ಉಡುಪಿ ರಾಷ್ಟ್ರೀಯ ಹೆದ್ದಾರಿ-66ರ ಡಿಕ್ಸಿ ಕ್ರಾಸ್ ಸಮೀಪ ಭಾನುವಾರ ಸಂಜೆ ಬೃಹತ್ ಗಾತ್ರದ ಟ್ರೇಲರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಜುಲೈ 5ರ ಸಂಜೆ 4:45ರ ಸುಮಾರಿಗೆ ಪಣಂಬೂರು ಬೀಚ್ ಕಡೆಯಿಂದ ಬಂದ GJ-06-BX-0086 ಮತ್ತು GJ-12-BZ-2722 ನೋಂದಣಿ ಸಂಖ್ಯೆಯ ಈ ಟ್ರೇಲರ್ ವಾಹನವನ್ನು ಚಾಲಕ ವಿನೋದ್ ಕುಮಾರ್ ಸಿಂಗ್ ಎಂಬಾತ ಅತಿ ನಿರ್ಲಕ್ಷ್ಯ ಮತ್ತು ದುಡುಕುತನದಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಸಾರ್ವಜನಿಕರು ಪರದಾಡುವಂತಾಯಿತು. ಪ್ರಾಥಮಿಕ ತನಿಖೆಯಲ್ಲಿ, ಈ ಟ್ರೇಲರ್ ಯಾವುದೇ ಸೂಕ್ತ ಅನುಮತಿ ಅಥವಾ ಮುನ್ಸೂಚನೆ ಪಡೆಯದೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಬೃಹತ್ ಯಂತ್ರೋಪಕರಣಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಂ.ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ವಿನೋದ್ ಕುಮಾರ್ ಸಿಂಗ್, EXG Express Global Logistics ಟ್ರಾನ್ಸ್‌ಪೋರ್ಟ್ ಕಂಪನಿಯ ಮಾಲೀಕ ಹಾಗೂ ಸಂಬಂಧಪಟ್ಟ ಕಂಪನಿಯ ಅಧಿಕಾರಿಗಳ ವಿರುದ್ಧ ಅ.ಕ್ರ 173/2026, ಕಲಂ 281, 285 ಬಿ.ಎನ್.ಎಸ್ ಮತ್ತು 184, 201 ಐ.ಎಂ.ವಿ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಬೃಹತ್ ವಾಹನಗಳ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

Category
ಕರಾವಳಿ ತರಂಗಿಣಿ