ಮಂಗಳೂರು : ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಸಭ್ಯಾಂಗಣದಲ್ಲಿ ರವಿವಾರ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಸರ್ಕಾರವು ಬೇಕಾದಷ್ಟು ಅನುದಾನವನ್ನು ನೀಡಿದೆ ಎಂದು ಪ್ರಕಟಿಸಿದರು. ಜಿಲ್ಲೆಯಲ್ಲಿ ಸದ್ಯಕ್ಕೆ ಅನುದಾನದ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲಾಧಿಕಾರಿಗಳು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ತಾಲೂಕಿಗೂ ತಲಾ 44 ಲಕ್ಷ ರೂ. ಗಳಂತೆ ಒಟ್ಟು 1.5 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದು ಮಾಹಿತಿ ನೀಡಿದರು. ಒಂದು ವೇಳೆ ಇನ್ನು ಹೆಚ್ಚಿನ ಅಗತ್ಯವಿದ್ದರೆ ಸರ್ಕಾರವು ಹೆಚ್ಚುವರಿ ಅನುದಾನ ಒದಗಿಸಲಿದೆ ಎಂದು ಅವರು ಭರವಸೆ ನೀಡಿದರು.
ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಧಾವಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸ್ಥಳಕ್ಕೆ ತೆರಳದೆ ಕೇವಲ ಯಾರಿಂದಲೋ ಫೋಟೋ ತರಿಸಿಕೊಂಡು, ತದನಂತರ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸುವುದು ಸರಿಯಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿ ನಡೆಗೆ ಬೇಸರ ವ್ಯಕ್ತಪಡಿಸಿದರು. ಪ್ರಕೃತಿ ವಿಕೋಪ ನಮ್ಮ ಕೈಯಲ್ಲಿಲ್ಲ, ಆದರೆ ಇದರಿಂದಾಗಿ ತೊಂದರೆಗೊಳಗಾದ ಸಂತ್ರಸ್ತರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಸ್ಪಂದಿಸಿ ಅವರ ಕಷ್ಟಗಳನ್ನು ನಿವಾರಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು. ರಾಜ್ಯಮಟ್ಟದಲ್ಲಿ ಮಾಡಿದ ನಿಯಮಗಳು ಕೆಲವು ಜಿಲ್ಲೆಗಳಿಗೆ ಹೊಂದಿಕೆಯಾಗುವುದಿಲ್ಲ, ಹಾಗಾಗಿ ನಿಯಮದ ವ್ಯಾಪ್ತಿಯಲ್ಲಿಯೇ ಸ್ಥಳೀಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯಲು ಶ್ರಮಿಸಬೇಕಾಗಿದೆ ಎಂದರು. ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಫುಟ್‌ಬಾಲ್‌ನಲ್ಲಿ ಚೆಂಡನ್ನು ಪಾಸ್ ಮಾಡಿದ ಹಾಗೆ ಮಾಡಬಾರದು, ನಿಂತು ಗೋಲು ಹೊಡೆಯಬೇಕು, ಅಂದರೆ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಲಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಅಡಿಕೆಗೆ ಕೆ.ಜಿ.ಗೆ ಎಷ್ಟು ರೇಟ್ ಇದೆ ಎಂದು ಸಚಿವ ಖಾದರ್ ಕೇಳಿದಾಗ ಅಧಿಕಾರಿಯೊಬ್ಬರು ತಪ್ಪಾಗಿ ದರ ಜಾಸ್ತಿ ಹೇಳಿ ಕ್ಷಮಿಸಿ ಎಂದಾಗ, "ಅಷ್ಟೊಂದು ರೇಟ್ ಇದ್ದರೆ ಎಲ್ಲರೂ ಅಡಿಕೆ ಬೆಳೆಯಲು ಆರಂಭಿಸುತ್ತಾರಲ್ಲ" ಎಂದು ಸಚಿವರು ಅಧಿಕಾರಿಯನ್ನು ಎಚ್ಚರಿಸಿದ ಪ್ರಸಂಗವೂ ನಡೆಯಿತು. ಜಿಲ್ಲೆಯ ಮಳೆ ವಿವರ ನೀಡಿದ ಅಧಿಕಾರಿಗಳು, ಮಾರ್ಚ್ 1ರಿಂದ ಮೇ 31ರ ತನಕದ ಪೂರ್ವ ಮುಂಗಾರು ವಾಡಿಕೆಗಿಂತ ಶೇ 32ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು. ಕಳೆದ ಏಳು ದಿನಗಳಿಂದ ಚೆನ್ನಾಗಿ ಮಳೆಯಾಗಿದ್ದರೂ ವಾಡಿಕೆಗಿಂತ ಕಡಿಮೆ ಇದೆ. ಜನವರಿ 1ರಿಂದ ಜುಲೈ 4ರ ತನಕ ಜಿಲ್ಲೆಯಲ್ಲಿ 785.7 |ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆ 1,338.07 ಮಿ.ಮೀ ಆಗಿರಬೇಕಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ಮಳೆಮಾಪನ ಕೇಂದ್ರಗಳು ಸರಿಯಾಗಿಲ್ಲ ಎಂಬ ದೂರುಗಳ ಬಗ್ಗೆ ಸಚಿವರು ಗಮನ ಸೆಳೆದಾಗ, ಜಿಲ್ಲೆಯಲ್ಲಿ ಒಟ್ಟು 274 ಮಳೆಮಾಪನ ಕೇಂದ್ರಗಳಿದ್ದು ಅವುಗಳಲ್ಲಿ ಕೇವಲ 108 ಮಾತ್ರ ಸರಿಯಾಗಿದೆ ಎಂದು ಎಡಿಸಿ ರಾಜು ಕೆ. ತಿಳಿಸಿದರು. ಮಳೆಮಾಪನ ಸರಿಯಾಗಿಲ್ಲದಿದ್ದರೆ ಕೃಷಿಗೆ ಸಮಸ್ಯೆಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಭೆಯ ಗಮನ ಸೆಳೆದರಲ್ಲದೆ, ಇದರಿಂದಾಗಿ ಜಿಲ್ಲೆಯಲ್ಲಿ ರೈತರಿಗೆ ತೊಂದರೆಯಾಗಿದ್ದು, ಸರ್ಕಾರದಿಂದ ಸಿಗಬೇಕಾದ ಬೆಳೆ ವಿಮೆಯಲ್ಲಿ ತಾರತಮ್ಯವಾಗಿದೆ ಎಂದು ಆಕ್ಷೇಪಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಸಭೆಗೆ ಮಾಹಿತಿ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 88 ಸಂಭವನೀಯ ಭೂಕುಸಿತ ಪ್ರದೇಶಗಳು ಮತ್ತು 92 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ನಾಗುರಿಯಲ್ಲಿ ಜುಲೈ 1ರಂದು ನಡೆದ ತಡೆಗೋಡೆ ಕುಸಿತ ಪ್ರಕರಣದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ತಾಂತ್ರಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಮತ್ತು ಜಾಗದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು. ಮಂಗಳೂರು ನಗರದಲ್ಲಿ ಕೆಲವು ಕಡೆ ತಗ್ಗು ಪ್ರದೇಶದಲ್ಲಿ ಸರ್ಕಾರಿ ನಿವೇಶನ ಪಡೆದು ಮನೆ ಕಟ್ಟಿ ವಾಸಿಸುತ್ತಿದ್ದಾರೆ. ಈ ಜಮೀನಿನ ಮೇಲಿನ ಜಾಗ ಖಾಸಗಿಯವರದ್ದಾಗಿದ್ದು, ಒಂದು ವೇಳೆ ಅಲ್ಲಿ ಭೂಕುಸಿತ ಉಂಟಾಗಿ ಕೆಳಗಿನ ಪ್ರದೇಶದಲ್ಲಿರುವ ಮನೆಗೆ ಬಿದ್ದು ಹಾನಿಗೊಂಡರೆ ಅದಕ್ಕೆ ಯಾರು ಜವಾಬ್ದಾರರು? ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಪ್ರಶ್ನಿಸಿದರು. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಜಾಗ ನಿವೇಶನ ಕೊಟ್ಟರೆ ಮಾತ್ರ ಸಾಲದು, ಅಲ್ಲಿ ಮನೆಗಳಿಗೆ ಸೂಕ್ತ ತಡೆಗೋಡೆಯನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.