image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಭಿನಯ ಜೀವನ ಕೌಶಲ್ಯ; ಎಲ್ಲ ಕ್ಷೇತ್ರಗಳಲ್ಲೂ ಅಗತ್ಯ: ವಿವೇಕ್ ಆಳ್ವ

ಅಭಿನಯ ಜೀವನ ಕೌಶಲ್ಯ; ಎಲ್ಲ ಕ್ಷೇತ್ರಗಳಲ್ಲೂ ಅಗತ್ಯ: ವಿವೇಕ್ ಆಳ್ವ

ಮೂಡುಬಿದಿರೆ : ಆಳ್ವಾಸ್ ಕಾಲೇಜು ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಂಗಭೂಮಿ, ಸಿನಿಮಾ, ಧಾರಾವಾಹಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವವರಿಗಾಗಿ ಆಯೋಜಿಸಲಾದ ಎರಡು ದಿನಗಳ ‘ಅಭಿನಯ ಸೂಕ್ಷ್ಮತೆಗಳ ತರಬೇತಿ ಕಾರ್ಯಾಗಾರ’ಕ್ಕೆ ಚಾಲನೆ ದೊರೆಯಿತು. ಕೇಂದ್ರದ ನಿರ್ದೇಶಕ ಡಾ. ಜೀವನ್‌ರಾಮ್ ಸುಳ್ಯ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು, ಅಭಿನಯವು ಕೇವಲ ರಂಗಭೂಮಿ ಅಥವಾ ಸಿನಿಮಾಕ್ಕೆ ಸೀಮಿತವಾಗಿಲ್ಲ. ಶಿಕ್ಷಕರು, ವೃತ್ತಿಪರರು, ಆಡಳಿತಗಾರರು ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಪರಿಣಾಮಕಾರಿ ಅಭಿವ್ಯಕ್ತಿಗೆ ಇದು ಅತ್ಯಗತ್ಯ. ಇಂದಿನ ಯುವಜನರಲ್ಲಿ ದೇಹದ ಚಲನವಲನದ ಬಿಗಿತ ಹೆಚ್ಚಾಗಿದ್ದು, ಅದನ್ನು ನಿವಾರಿಸಿ ದೇಹಭಾಷೆ, ಆತ್ಮವಿಶ್ವಾಸ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಪ್ರತಿಭೆಯ ಜೊತೆಗೆ ಪ್ಯಾಷನ್, ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಹಾಗೂ ಅಭಿರುಚಿ ಮುಖ್ಯ ಎಂದು ಹೇಳಿದರು.

ಡಾ. ಜೀವನ್‌ರಾಮ್ ಸುಳ್ಯ ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ಉನ್ನತ ಸ್ಥಾನ ಅಲಂಕರಿಸಿದ್ದು, ರಂಗಕಲೆಯನ್ನು ವ್ಯವಸ್ಥಿತವಾಗಿ ಕಲಿಯಲು ಈ ಕಾರ್ಯಾಗಾರ ಉತ್ತಮ ವೇದಿಕೆಯಾಗಿದೆ. ಸೈದ್ಧಾಂತಿಕ ಕಲಿಕೆಗೆ ಹೋಲಿಸಿದರೆ ಪ್ರಾಯೋಗಿಕ ಅನುಭವದಿಂದ ಹತ್ತು ಪಟ್ಟು ಹೆಚ್ಚಿನ ಅರಿವು ದೊರೆಯುತ್ತದೆ ಎಂದು ಅವರು ಶ್ಲಾಘಿಸಿದರು. ಕಾರ್ಯಾಗಾರದ ನಿರ್ದೇಶಕ ಡಾ. ಜೀವನ್‌ರಾಮ್ ಸುಳ್ಯ ಮಾತನಾಡಿ, ಅಭಿನಯವು ವೈಯಕ್ತಿಕ ಪ್ರದರ್ಶನವಲ್ಲ, ಅದು ಸಮೂಹದೊಂದಿಗೆ ಬೆಳೆಯುವ ಕಲೆಯಾಗಿದೆ. ಕಲಾವಿದನು ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಈ ಕಾರ್ಯಾಗಾರದಲ್ಲಿ ದೇಹಭಾಷೆ, ಧ್ವನಿ ನಿಯಂತ್ರಣ, ಭಾವಾಭಿವ್ಯಕ್ತಿ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಟಕ ಬದುಕಿನಲ್ಲಿ ಭಾವನೆ, ಆಲೋಚನೆ ಮತ್ತು ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುವುದನ್ನು ಕಲಿಸುತ್ತದೆ. ರಂಗಭೂಮಿ ಭಾಷಾ ಪ್ರೌಢಿಮೆ, ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲ್ಯಗಳನ್ನು ವೃದ್ಧಿಸುತ್ತದೆ ಎಂದರು. ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಅಗತ್ಯವಾದ ಮೂಲಭೂತ ಮತ್ತು ಉನ್ನತ ಮಟ್ಟದ ಅಭಿನಯ ತಂತ್ರಗಳ ತರಬೇತಿ ನೀಡಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದಿವ್ಯಾ ಭಂಡಾರಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ