image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ನಿರಾಕ್ಷೇಪಣಾ ಪತ್ರ ನೀಡಲು ಡಿಸಿಎಂಗೆ ಎಂಎಲ್‌ಸಿ ಕಿಶೋರ್ ಕುಮಾರ್ ಮನವಿ

ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ನಿರಾಕ್ಷೇಪಣಾ ಪತ್ರ ನೀಡಲು ಡಿಸಿಎಂಗೆ ಎಂಎಲ್‌ಸಿ ಕಿಶೋರ್ ಕುಮಾರ್ ಮನವಿ

ಬೆಂಗಳೂರು: ಕೋಳಿ ಸಾಕಾಣಿಕೆ ಫಾರಂಗಳಿಗೆ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ರೈತರು ಎದುರಿಸುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸುವಂತೆ ಆಗ್ರಹಿಸಿ, ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆಯನ್ನು ನಂಬಿ ಬದುಕುತ್ತಿರುವ ರೈತರು ಮತ್ತು ಯುವಕರು, ವಿದ್ಯುತ್ ಸಂಪರ್ಕಕ್ಕಾಗಿ ಎಸ್ಕಾಂಗಳು ಕೇಳುವ ಗ್ರಾಮ ಪಂಚಾಯತ್‌ನ ನಿರಾಕ್ಷೇಪಣಾ ಪತ್ರದ (NOC) ಕಡ್ಡಾಯ ನಿಯಮದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಈ ಕಟ್ಟಡಗಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಡಿ ಸ್ವತ್ತಿನ ಸಂಖ್ಯೆ ನೀಡಲು ಅಥವಾ ಎನ್‌ಒಸಿ ಒದಗಿಸಲು ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ, ರೈತರು ವಿದ್ಯುತ್ ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೋಳಿ ಸಾಕಾಣಿಕೆಯು ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಕೃಷಿ ಪೂರಕ ಚಟುವಟಿಕೆಯಾಗಿರುವುದರಿಂದ, ಗ್ರಾಮ ಪಂಚಾಯತ್‌ಗಳ ಬದಲಾಗಿ ಕಂದಾಯ ಇಲಾಖೆಯ ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿಗಳಿಂದಲೇ ಎನ್‌ಒಸಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಸುತ್ತೋಲೆ ಹೊರಡಿಸುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಅವರು ಕೋರಿದ್ದಾರೆ. ಶಾಸಕರ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Category
ಕರಾವಳಿ ತರಂಗಿಣಿ