ಮಂಗಳೂರು:ನಗರದ ಬೋಳೂರು ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪ್ರದೇಶದಲ್ಲಿ ಕಳೆದ 75 ವರ್ಷಗಳಿಂದ ಸ್ಥಳೀಯರ ಪಾಲಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಒಳಚರಂಡಿ (ಡ್ರೈನೇಜ್) ಸಮಸ್ಯೆ ಕುರಿತು ದೈವಸ್ಥಾನದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಹಿರಿಯ ಅಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನಿವಾಸಿಗಳ ಸಮ್ಮುಖದಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಈ ಭಾಗದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಜನರ ಬಹುದೊಡ್ಡ ಸಂಕಷ್ಟವಾಗಿದೆ. ಹಿಂದಿನ ಅವಧಿಯಲ್ಲೇ ಕುಡ್ಸೆಂಪ್ (KUDCEMP) ಮೂಲಕ ಈ ಯೋಜನೆಗೆ ಅನುದಾನ ಮೀಸಲಿಟ್ಟಿದ್ದರೂ, ಭೌಗೋಳಿಕವಾಗಿ ನೆಲದಡಿಯಲ್ಲಿರುವ ಬಂಡೆಕಲ್ಲುಗಳ ಕಾರಣದಿಂದ ಯೋಜನೆ ಅನುಷ್ಠಾನದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಿವೆ ಎಂದು ವಿವರಿಸಿದರು. ಸದ್ಯ ಈ ಯೋಜನೆ ಕಾರ್ಯಗತಗೊಳ್ಳಲು ಸುಮಾರು 2.5 ಕೋಟಿಯಿಂದ 3 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನಸಾಮಾನ್ಯರ ದಶಕಗಳ ಬೇಡಿಕೆಗೆ ಈ ಬಾರಿ ಶತಾಯಗತಾಯ ಮುಕ್ತಿ ನೀಡಲೇಬೇಕೆಂಬ ದೃಢ ನಿರ್ಧಾರ ಕೈಗೊಂಡಿದ್ದು, ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಅಗತ್ಯ ಅನುದಾನ ಮತ್ತು ಅನುಮೋದನೆಗೆ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ನರೇಶ್ ಶೆಣೈ, ಕಾರ್ಯಪಾಲ ಅಭಿಯಂತರರಾದ ನಾಗರಾಜ್, ಸಹಾಯಕ ಕಾರ್ಯಪಾಲ ಅಭಿಯಂತರರಾದ ಶಿವಲಿಂಗಯ್ಯ, ಸಹಾಯಕ ನಗರ ಯೋಜನಾಧಿಕಾರಿ ಗುರುಪ್ರಸಾದ್, ಕುಡ್ಸೆಂಪ್ ಅಧಿಕಾರಿಗಳಾದ ವೆಂಕಟ್ರಮಣ, ಜಯಪ್ರಕಾಶ್ ಮತ್ತು ಶಿವು ಕುಮಾರ್ ಉಪಸ್ಥಿತರಿದ್ದರು.
ಅಲ್ಲದೆ, ನಿಕಟಪೂರ್ವ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು, ಶ್ರೀ ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ, ಮೊಗವೀರ ಸಭಾ, ಜಯಲಕ್ಷ್ಮಿ ಫ್ರೆಂಡ್ಸ್ ಕ್ಲಬ್, ಯೂನಿಟೈಡ್ ಸ್ಪೋರ್ಟ್ಸ್ ಕ್ಲಬ್, ನಾರಾಯಣ ಗುರು ಸೇವಾ ಸಂಘ, ವಿವಿಧ ಮಹಿಳಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ನೂರಾರು ಸ್ಥಳೀಯ ನಿವಾಸಿಗಳು ಭಾಗವಹಿಸಿ ಸಮಸ್ಯೆಯ ತುರ್ತು ಪರಿಹಾರಕ್ಕೆ ಆಗ್ರಹಿಸಿದರು.