image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎನ್‌ಡಿಎ ಆಯ್ಕೆಯಲ್ಲಿ ನಾಯಕತ್ವ ಗುಣಕ್ಕೇ ಆದ್ಯತೆ: ಕರ್ನಲ್ ಸೋಮು ಮಹಾರಾಜನ್

ಎನ್‌ಡಿಎ ಆಯ್ಕೆಯಲ್ಲಿ ನಾಯಕತ್ವ ಗುಣಕ್ಕೇ ಆದ್ಯತೆ: ಕರ್ನಲ್ ಸೋಮು ಮಹಾರಾಜನ್

ಮೂಡುಬಿದಿರೆ : ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಆಯ್ಕೆ ಪ್ರಕ್ರಿಯೆಯಲ್ಲಿ ಪಠ್ಯಜ್ಞಾನಕ್ಕಿಂತ ಅಭ್ಯರ್ಥಿಗಳ ನಾಯಕತ್ವ ಗುಣ, ವ್ಯಕ್ತಿತ್ವ, ತಾರ್ಕಿಕ ಚಿಂತನೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿಯ ನಿರ್ದೇಶಕ ಕರ್ನಲ್ ಸೋಮು ಜಿ ಮಹಾರಾಜನ್ ತಿಳಿಸಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ) ಕೇವಲ ಶೈಕ್ಷಣಿಕ ಸಾಧನೆಯನ್ನು ಪರೀಕ್ಷಿಸುವುದಿಲ್ಲ. ಬದಲಿಗೆ ಅಭ್ಯರ್ಥಿಯ ವ್ಯಕ್ತಿತ್ವ, ಭಾವನಾತ್ಮಕ ಸ್ಥಿರತೆ, ಸಂವಹನ ಕೌಶಲ್ಯ ಹಾಗೂ ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತದೆ. ಮನೋವೈಜ್ಞಾನಿಕ ಪರೀಕ್ಷೆಗಳು, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಅಭ್ಯರ್ಥಿಯ ಸಹಜ ವ್ಯಕ್ತಿತ್ವ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವವನ್ನು ಗುರುತಿಸಲಾಗುತ್ತದೆ. ಇಲ್ಲಿ ಕಂಠಪಾಠದ ಉತ್ತರಗಳಿಗಿಂತ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವ ನೈಜ ಆಲೋಚನೆಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ವಿವರಿಸಿದರು. ಭವಿಷ್ಯದ ಅಧಿಕಾರಿಗಳಾಗಬಯಸುವ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ, ಸಂವಹನ ಕೌಶಲ್ಯ, ದೇಹ ಭಾಷೆ ಹಾಗೂ ದೈಹಿಕ ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಸದಾಕತ್ ಮಾತನಾಡಿ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಎನ್‌ಡಿಎ ಅತ್ಯುತ್ತಮ ಪ್ರವೇಶದ್ವಾರವಾಗಿದೆ. ಇದು ದೇಶದ ಅತ್ಯಂತ ಕಠಿಣ ಹಾಗೂ ಗೌರವಾನ್ವಿತ ಪರೀಕ್ಷೆಗಳಲ್ಲಿ ಒಂದಾಗಿದ್ದು, ಬೌದ್ಧಿಕ ಸಾಮರ್ಥ್ಯದ ಜೊತೆಗೆ ರಾಷ್ಟ್ರಸೇವೆಯ ಬದ್ಧತೆಯನ್ನೂ ಪರೀಕ್ಷಿಸುತ್ತದೆ ಎಂದರು. ತದನಂತರ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹಾಗೂ ಸಶಸ್ತ್ರ ಪಡೆಗಳಲ್ಲಿನ ವೃತ್ತಿ ಅವಕಾಶಗಳ ಕುರಿತು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಸಂಯೋಜಕ ವಿಖ್ಯಾತ ಭಟ್, ಎನ್‌ಡಿಎ ಸಂಯೋಜಕ ದೇವಿಪ್ರಸಾದ್ ಪದ್ಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ