image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೀವನದಲ್ಲಿ ವೃತ್ತಿ-ಆಸಕ್ತಿ ಸಮತೋಲನ ಅಗತ್ಯ: ನಮೃತಾ ಮೋಹನ್

ಜೀವನದಲ್ಲಿ ವೃತ್ತಿ-ಆಸಕ್ತಿ ಸಮತೋಲನ ಅಗತ್ಯ: ನಮೃತಾ ಮೋಹನ್

ಮೂಡುಬಿದಿರೆ: ಜೀವನದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಆಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು ನಿರಂತರ ಪ್ರಯತ್ನ ಮಾಡಿದಾಗ ಮಾತ್ರ ದೊಡ್ಡ ಸಾಧನೆ ಸಾಧ್ಯ ಎಂದು ‘ಟೆಂಪಲ್ ಗರ್ಲ್’ ಖ್ಯಾತಿಯ ಆಧ್ಯಾತ್ಮಿಕ ಕಂಟೆಂಟ್ ಕ್ರಿಯೇಟರ್ ನಮೃತಾ ಮೋಹನ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

​ತಮ್ಮ ಆರಂಭಿಕ ಜೀವನದ ಹೋರಾಟವನ್ನು ಹಂಚಿಕೊಂಡ ಅವರು, 19ನೇ ಪ್ರಯತ್ನದಲ್ಲಿ ಜೆ.ಪಿ. ಮಾರ್ಗನ್ ಸಂಸ್ಥೆಯಲ್ಲಿ ಉದ್ಯೋಗ ದೊರೆತಿದ್ದು, ಬಳಿಕ ಸಿಟಿಬ್ಯಾಂಕ್ ಹಾಗೂ ವಾಲ್ಟ್ ಡಿಸ್ನಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಪ್ರಸಂಗವನ್ನು ವಿವರಿಸಿದರು. ಯಾವುದೇ ವೀಡಿಯೊ ನಿರ್ಮಾಣದ ಹಿನ್ನೆಲೆಯಿಲ್ಲದಿದ್ದರೂ, ಬಳಿಕ ಕಾರ್ಪೊರೇಟ್ ಜೀವನ ತೊರೆದು ದೇವಾಲಯಗಳ ಕುರಿತು ಡಿಜಿಟಲ್ ವಿಷಯಗಳನ್ನು ಸೃಷ್ಟಿಸಲು ಆರಂಭಿಸಿದ ಪರಿಯನ್ನು ತಿಳಿಸಿದರು. ಮೊದಲ ವೀಡಿಯೊ ಕೇವಲ 50 ವೀಕ್ಷಕರನ್ನು ಹೊಂದಿದ್ದರೂ, ನಿರಂತರ ಪರಿಶ್ರಮದಿಂದ ಇಂದು 21 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿರುವುದಾಗಿ ಸಂತೋಷ ವ್ಯಕ್ತಪಡಿಸಿದರು.

​ಕಂಟೆಂಟ್ ನಿರ್ಮಾಣದಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆ ಮುಖ್ಯವಾಗಿದ್ದು, ತಮ್ಮ ಚಾನೆಲ್‌ನಲ್ಲಿ ಪ್ರತಿ ವಿಷಯವನ್ನೂ ಸಮಗ್ರ ಅಧ್ಯಯನದ ಬಳಿಕವೇ ಪ್ರಕಟಿಸಲಾಗುತ್ತದೆ ಎಂದರು. ಟೀಕೆಗಳ ಕುರಿತು ಉತ್ತರಿಸಿದ ಅವರು, "ನಮ್ಮ ಆತ್ಮಸಾಕ್ಷಿಗೆ ನಾವು ಪ್ರಾಮಾಣಿಕರಾಗಿದ್ದರೆ ಬೇರೆಯವರ ಅಭಿಪ್ರಾಯಕ್ಕೆ ಮಹತ್ವ ನೀಡಬೇಕಾಗಿಲ್ಲ" ಎಂದರು. ಶಬರಿಮಲೆ ಮತ್ತು ದೇವಾಲಯ ಪ್ರವೇಶದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಸಂಪ್ರದಾಯಗಳನ್ನು ಕೇವಲ ಪ್ರಚಾರಕ್ಕಾಗಿ ಪ್ರಶ್ನಿಸುವುದು ಸರಿಯಲ್ಲ. ಯುವಜನರು ದೇಶದ ಅಭಿವೃದ್ಧಿಗೆ ನೆರವಾಗುವ ವಿಜ್ಞಾನ, ಸಂಶೋಧನೆಯ ಕಡೆಗೆ ಗಮನ ಹರಿಸಬೇಕು ಮತ್ತು ಆಧ್ಯಾತ್ಮಿಕತೆಯ ಮೂಲ ಉದ್ದೇಶ ಉತ್ತಮ ಮನುಷ್ಯರಾಗುವುದೇ ಹೊರತು ಭಿನ್ನಾಭಿಪ್ರಾಯ ಮೂಡಿಸುವುದಲ್ಲ ಎಂದು ಸ್ಪಷ್ಟಪಡಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮೃತಾ ಮೋಹನ್ ಅವರು ತಮ್ಮ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡು ಯಶಸ್ವಿ ಬದುಕು ಕಟ್ಟಿ ಕೊಂಡಿರುವುದು ವಿದ್ಯಾರ್ಥಿಗಳಿಗೆ ಮಾದರಿ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಸಂಯೋಜಕಿ ಡಾ. ದೀಪಾ ಕೊಠಾರಿ, ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಧು ಕಾರ್ಯಕ್ರಮ ನಿರೂಪಿಸಿ, ನಿಯತಿ ಅಮೀನ್ ಅತಿಥಿ ಪರಿಚಯಿಸಿದರು ಮತ್ತು ಲಿಖಿತಾ ವಂದಿಸಿದರು.

Category
ಕರಾವಳಿ ತರಂಗಿಣಿ