ಮಂಗಳೂರು: ಕಾಟಿಪಳ್ಳ ಸಮೀಪದ 17 ವರ್ಷ ಪ್ರಾಯದ ಗರ್ಭಿಣಿಯಾಗಿದ್ದ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸುರತ್ಕಲ್ ಮಹಿಳಾ ಕಾಂಗ್ರೆಸ್ ನಿಯೋಗವು ಮಂಗಳವಾರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರುವಂತೆ ಯಾವುದೇ ಒತ್ತಡ, ಪ್ರಭಾವಕ್ಕೆ ಗುರಿಯಾಗದೆ ನಿಷ್ಪಕ್ಷಪಾತ, ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿ ಮುನೀಶ್ ಪೂಜಾರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್, ಶಶಿಕಲಾ ಪದ್ಮನಾಭ, ಸಾರಿಕಾ ಪೂಜಾರಿ, ಅನಿತಾ, ಪದ್ಮ ಅರ್ಚನಾ ಆಚಾರ್ಯ, ಜಮೀಲಾ, ಯಶೋದಾ, ಪ್ರಮೀಳಾ ಉಪಸ್ಥಿತರಿದ್ದರು.