image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ: ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಸಂಸ್ಮರಣಾ ಸರ್ವಧರ್ಮೀಯರ ಸಮಾವೇಶ

ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ: ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಸಂಸ್ಮರಣಾ ಸರ್ವಧರ್ಮೀಯರ ಸಮಾವೇಶ

ಉಜಿರೆ: ಜೈನಧರ್ಮದ ಸಾರವಾದ ಸತ್ಯ, ಅಹಿಂಸೆ ಮತ್ತು 'ಬದುಕು ಮತ್ತು ಬದುಕಲು ಬಿಡು' ಎಂಬ ತತ್ವವನ್ನು ಜೀವನವಿಡೀ ಪಾಲಿಸಿ, ಸರ್ವಧರ್ಮಿಯರಿಗೂ ಬಹುಮುಖಿ ಸಮಾಜಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ದಿವಂಗತ ಎನ್. ಪ್ರೇಮ್‌ಕುಮಾರ್ ಹೊಸ್ಮಾರ್ ಅವರು ಆದರ್ಶ ಶ್ರಾವಕರತ್ನವಾಗಿ ಬಾಳಿ ಬದುಕಿದವರು ಎಂದು ನರಸಿಂಹರಾಜಪುರ ಬಸ್ತಿಮಠದ ಪೂಜ್ಯ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ಇತ್ತೀಚೆಗೆ ನಿಧನರಾದ ಹೊಸ್ಮಾರಿನ ಉದ್ಯಮಿ ಹಾಗೂ ಆದರ್ಶ ಸಮಾಜಸೇವಕ ಎನ್. ಪ್ರೇಮ್‌ಕುಮಾರ್ ಅವರ ಸ್ಮರಣಾರ್ಥವಾಗಿ ಭಾನುವಾರ ನಾರಾವಿಯಲ್ಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಸರ್ವಧರ್ಮೀಯರ ಸಮಾವೇಶದಲ್ಲಿ ಭಾಗವಹಿಸಿ ಅವರು ವಿನಯಾಂಜಲಿ ಸಲ್ಲಿಸಿ ಆಶೀರ್ವಚನ ನೀಡಿದರು. ಶಾಶ್ವತ ಧರ್ಮಕಾರ್ಯಗಳನ್ನು ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕ ಹಾಗೂ ಪರಿಪೂರ್ಣವಾಗುತ್ತದೆ ಎಂದು ತಿಳಿಸಿದ ಸ್ವಾಮೀಜಿ, ಜೈನಧರ್ಮದ ಪ್ರಕಾರ ದೇಹಕ್ಕೆ ಮಾತ್ರ ಸಾವು, ಆತ್ಮನಿಗೆ ಸಾವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದಾಗ ಪುಣ್ಯಸಂಚಯವಾಗಿ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ವಿವರಿಸಿದ ಅವರು, ಪ್ರೇಮ್‌ಕುಮಾರ್ ಅವರ ಆದರ್ಶ ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ವಿನಯಾಂಜಲಿಯಾಗಿದೆ ಹಾಗೂ ಅವರ ಹೆಸರಿನಲ್ಲಿ ಗಿಡ-ಮರಗಳನ್ನು ಬೆಳೆಸಿ, ಯಾವುದಾದರೂ ಶಾಶ್ವತ ಸೇವಾಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಪ್ರಸಾದಶೆಟ್ಟಿ ನಾರಾವಿ ಅವರು, ಸರ್ವರಿಗೂ ಆಪದ್ಬಾಂಧವರಾಗಿ, ಹೃದಯಶ್ರೀಮಂತಿಕೆಯಿಂದ ಸರ್ವಧರ್ಮೀಯರಿಗೂ ಪ್ರೇಮ್‌ಕುಮಾರ್ ಮಾಡಿದ ಸೇವಾ ಕಾರ್ಯಗಳು ಸರ್ವರಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ ಮತ್ತು ಅವರು ತಮ್ಮ ಮಾನವೀಯತೆಯ ಸೇವೆಯಿಂದ ಸದಾ ಅಮರರಾಗಿದ್ದಾರೆ ಎಂದರು. ನಾರಾವಿ ಸಂತ ಅಂತೋನಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಜೆರೋಂ ಡಿ’ಸೋಜಾ ಮಾತನಾಡಿ, ಚರ್ಚ್ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ ಪ್ರೇಮ್‌ಕುಮಾರ್ ಅವರು ಚರ್ಚ್ ಹಾಗೂ ಶಾಲೆಗೆ ನೀಡಿದ ಅನನ್ಯ ಸೇವೆಯನ್ನು ಸ್ಮರಿಸಿದರು. ಮೂಡಬಿದ್ರೆಯ ಕೆ. ಅಭಯಚಂದ್ರ ಜೈನ್ ಮಾತನಾಡಿ, ಬಸದಿಗಳು, ಮಠ-ಮಂದಿರಗಳು, ಮಸೀದಿಗಳು ಹಾಗೂ ಚರ್ಚ್‌ಗಳಿಗೆ ಪ್ರೇಮ್‌ಕುಮಾರ್ ಮುಕ್ತಹಸ್ತದಿಂದ ನೀಡಿದ ಸೇವೆಯನ್ನು ಶ್ಲಾಘಿಸಿದರು. ಸಮಾವೇಶದಲ್ಲಿ ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಸುನಿಲ್ ಕುಮಾರ್, ಕಾರ್ಕಳದ ಶೇಖರ ಮಡಿವಾಳ, ರವೀಂದ್ರ ಶೆಟ್ಟಿ, ವಕೀಲ ಮುರಳೀಧರ ಭಟ್, ಶ್ರೀರಂಗ ಮಯ್ಯ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಅವರು ಭಾಗವಹಿಸಿ ತಮ್ಮ ನುಡಿನಮನ ಸಲ್ಲಿಸಿದರು. ಬೆಂಗಳೂರಿನ ದಿಶಾ ಬಳ್ಳಾಲ್ ಕಾರ್ಯಕ್ರಮಕ್ಕೆ ಆಗಮಿಸಿದ್ದವರನ್ನು ಸ್ವಾಗತಿಸಿದರು. ವಿಜಯ ಕುಮಾರ್ ನೂರಾಳಬೆಟ್ಟು ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ದಿವಂಗತ ಪ್ರೇಮ್‌ಕುಮಾರ್ ಅವರ ಕುಟುಂಬಸ್ಥರು ಹಾಗೂ ಹಾಸನದ ಡಾ. ಆದರ್ಶ ಮತ್ತು ಡಾ. ಪ್ರತಿಮಾ ಉಪಸ್ಥಿತರಿದ್ದರು. ಸಮಾವೇಶದ ಅಂಗವಾಗಿ ನಾರಾವಿಯ ಸೂರ್ಯನಾರಾಯಣ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿತು.

Category
ಕರಾವಳಿ ತರಂಗಿಣಿ