ಮಂಗಳೂರು: ಕರಾವಳಿಯ ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳತ್ತ ಆಸಕ್ತಿ ತೋರಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ರಾಮಕೃಷ್ಣ ಮಿಷನ್‌ನ ಸ್ವಾಮಿ ಜಿತಕಾಮಾನಂದಜಿ ಕರೆ ನೀಡಿದರು. ರಚನಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಮತ್ತು ಮಂಗಳೂರು ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ಜೂನ್ 28ರಂದು 'ಮಾರ್ಗದರ್ಶಿ - ಕ್ರಾಕಿಂಗ್ ದಿ ಯುಪಿಎಸ್ಸಿ ಎಕ್ಸಾಮಿನೇಷನ್' ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ ಅವರು, ಮಂಗಳೂರಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಠಿಣ ಎಂದು ಭಾವಿಸಿ ಕಡಿಮೆ ಸಂಖ್ಯೆಯಲ್ಲಿ ಪ್ರಯತ್ನಿಸುತ್ತಿದ್ದಾರೆ, ಆದರೆ ದೃಢ ಸಂಕಲ್ಪ ಮತ್ತು ಸೂಕ್ತ ಮಾರ್ಗದರ್ಶನವಿದ್ದರೆ ಯಶಸ್ಸು ಖಂಡಿತ ಸಾಧ್ಯ ಎಂದರು. ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಪಣತೊಡಬೇಕು ಎಂದು ಪ್ರೇರೇಪಿಸಿದ ಅವರು, ರಾಮಕೃಷ್ಣ ಮಿಷನ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಓದುವ ಕೋಣೆ (Reading Room) ವ್ಯವಸ್ಥೆ ಮಾಡಲಾಗಿದೆ, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೋಹನ್ ಕೃಷ್ಣಮೂರ್ತಿ, ಚಂದ್ರಮೋಹನ್ ಇನಗಂಟಿ, ಡಾ. ಸುಮನಾ ಬಿ., ದಾನ್ ಪ್ರಕಾಶ್ ಹಾಗೂ ಸಂತೋಷ್ ರಾವ್ ಅವರು ಯುಪಿಎಸ್ಸಿ ಪರೀಕ್ಷೆಯ ಮಾದರಿ, ಪರಿಣಾಮಕಾರಿ ಸಿದ್ಧತಾ ವಿಧಾನಗಳು, ಸಮಯ ನಿರ್ವಹಣೆ ಮತ್ತು ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳ ಕುರಿತು ಮಾಹಿತಿ ಹಂಚಿಕೊಂಡರು.
ಸಂತೋಷ್ ರಾವ್ ಅವರು ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2025 ತರಬೇತಿ ಕೋರ್ಸ್ ಕುರಿತು ಮಾಹಿತಿ ನೀಡಿದರು. ರಚನಾ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೋ ಸ್ವಾಗತಿಸಿದರು ಮತ್ತು ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್ ವಂದಿಸಿದರು. ಕಾರ್ಯಕ್ರಮದಲ್ಲಿ ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ನಡೆದ ಸಂವಾದದ ಮೂಲಕ ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.