image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೋಳಾರದಲ್ಲಿ ಅವೇಕ್ ಕುಡ್ಲ ಅಭಿಯಾನ: ಸ್ವಚ್ಛತಾ ಜಾಗೃತಿಯೊಂದಿಗೆ ನೈರ್ಮಲ್ಯಕ್ಕೆ ಒತ್ತು

ಬೋಳಾರದಲ್ಲಿ ಅವೇಕ್ ಕುಡ್ಲ ಅಭಿಯಾನ: ಸ್ವಚ್ಛತಾ ಜಾಗೃತಿಯೊಂದಿಗೆ ನೈರ್ಮಲ್ಯಕ್ಕೆ ಒತ್ತು

ಮಂಗಳೂರು: ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ನ 'ಅವೇಕ್ ಕುಡ್ಲ' ಪರಿಕಲ್ಪನೆಯಡಿ, ದಿನಾಂಕ 29/06/2026ರಂದು ಭಾನುವಾರ ಬೋಳಾರ ಪ್ರದೇಶದಲ್ಲಿ ಬೃಹತ್ 'ಸ್ವಚ್ಛತಾ ಜಾಗೃತಿ ಅಭಿಯಾನ'ವನ್ನು ಯಶಸ್ವಿಯಾಗಿ ನಡೆಸಲಾಯಿತು. ವಿಜಯ ಗೇಮ್ಸ್ ಟೀಮ್ (ರಿ.) ಬೋಳಾರ ಮತ್ತು ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ವಿಭಾಗದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ನೂರಾರು ಮಂದಿ ಸ್ವಯಂಸೇವಕರು ಪಾಲ್ಗೊಂಡು ಸಮಾಜಮುಖಿ ಕಾರ್ಯ ಮೆರೆದರು.

ವಿಜಯ ಗೇಮ್ಸ್ ಟೀಮ್ ಅಧ್ಯಕ್ಷ ಶ್ರೀ ಮನೋಜ್ ಕೋಟ್ಯಾನ್ ಅವರ ಸಾರಥ್ಯದಲ್ಲಿ ತಂಡವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೋಳಾರ ಕೆಡವಿನ ಬಾಗಿಲವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಅಪಾರ ಪ್ರಮಾಣದ ಕಸ-ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿತು. ತಂಡದ ಉಪಾಧ್ಯಕ್ಷರಾದ ಶ್ರೀ ದೀಪಕ್ ಸುವರ್ಣ ಮತ್ತು ಶ್ರೀ ಪ್ರವೀಣ್ ಅವರ ನೇತೃತ್ವದ ಮತ್ತೊಂದು ತಂಡ ನೇತ್ರಾವತಿ ನದಿ ತಟದಲ್ಲಿದ್ದ ಥರ್ಮಕಾಲ್ ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಿ ನೈರ್ಮಲ್ಯಕ್ಕೆ ಆದ್ಯತೆ ನೀಡಿತು. ಇದರೊಂದಿಗೆ, ಕಾಸ್ಸಿಯಾ ಪ್ರೌಢ ಶಾಲೆಯ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಪ್ರೀತಿ ಲೋಬೊ ಮತ್ತು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಮನೆ ಮನೆಗೆ ತೆರಳಿ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವಂತೆ ಹಾಗೂ ಅಂಗಡಿ-ಮುಂಗಟ್ಟುಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಕಸದ ಡಬ್ಬಿಗಳನ್ನು ಇರಿಸುವಂತೆ ಜನಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಉಮಾನಾಥ್ ಕೋಟೆಕರ್ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ವೈಭವೀಕರಿಸದೆ ಪರಿಹಾರದತ್ತ ಸಾಗುವುದೇ 'ಅವೇಕ್ ಕುಡ್ಲ'ದ ಉದ್ದೇಶ ಎಂದು ವಿವರಿಸಿದರು. ಟ್ರಸ್ಟ್‌ನ ಕಾರ್ಯಕ್ರಮ ಸಂಯೋಜಕ ಶ್ರೀ ಪುನೀತ್ ಅವರು ಮಾತನಾಡಿ, ಕೇವಲ 500-600 ಮೀಟರ್ ರಸ್ತೆಯಲ್ಲೇ ಇಷ್ಟೊಂದು ತ್ಯಾಜ್ಯ ಸಿಕ್ಕಿರುವುದು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಸಾಕ್ಷಿ. ಪ್ರತಿಯೊಬ್ಬರೂ 'ನಮ್ಮ ಕಸ-ನಮ್ಮ ಜವಾಬ್ದಾರಿ' ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು ಮತ್ತು ನಗರ ಪಾಲಿಕೆಯು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಿ ಸರಿಯಾದ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯರು, ವಿಜಯ ಗೇಮ್ಸ್ ಟೀಮ್‌ನ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ