ಮಂಗಳೂರು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನವದುರ್ಗ ಲೇಖನ ಯಜ್ಞ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಮಲ ಪ್ರಭಾಕರ್ ಭಟ್, ಅಶ್ವಿನಿ ಮುಹಿಲನ್, ಸುನಂದಾ ಪುರಾಣಿಕ್, ಮಮತಾ ಸುನೀಲ್ ಆಚಾರ್, ವೃಂದ ವೇದವ್ಯಾಸ ಕಾಮತ್, ನಿರ್ಮಿತ ಸತೀಶ್ ಪಟ್ಲ, ಶ್ರೀದುರ್ಗ ಹರೀಶ್ ಪೂಂಜಾ, ಮಮತಾ ಗಟ್ಟಿ, ಮಲ್ಲಿಕಾ ಪ್ರಸಾದ್ ಶೆಟ್ಟಿ ದೀಪ ಪ್ರಜ್ವಲನೆಗೈದು, ಬಳಿಕ ಮಾತಾಡಿದ ಕಾಪು ಮಾರಿಗುಡಿ ಕ್ಷೇತ್ರದ ಕುಮಾರ ತಂತ್ರಿಗಳು, “ಹೆತ್ತು ಹೊತ್ತ ತಾಯಿಗೆ ಸನಾತನ ಸಂಸ್ಕೃತಿ ಬಹಳಷ್ಟು ಗೌರವವನ್ನು ನೀಡಿದೆ. ಆದೇ ರೀತಿ ಇಡೀ ಲೋಕದ ತಾಯಿಯಾದ ಕಾಪುವಿನ ಮಾರಿಯಮ್ಮ ನಮ್ಮ ಸಂಕಷ್ಟಗಳನ್ನು ಕಳೆಯುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಅಮ್ಮನ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಕಾಪುವಿನ ಮಾರಿಯಮ್ಮ ಪ್ರತಿಷ್ಠಾಪನೆಗೊಂಡಿದ್ದು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಕೆಲಸ ಭರದಿಂದ ನಡೆಯುತ್ತಿದೆ.ಇಂದು ಅಮ್ಮನವರ ನವದುರ್ಗ ಲೇಖನ ಯಜ್ಞಕ್ಕೆ ಚಾಲನೆ ಸಿಕ್ಕಿದೆ. ನಾವೆಲ್ಲರೂ ನವದುರ್ಗ ಮಂತ್ರ ನಿತ್ಯ ಜಪಿಸುವ ಮೂಲಕ ತಾಯಿಯನ್ನೇ ನಮ್ಮ ರಕ್ಷಕಿಯನ್ನಾಗಿ ಪಡೆಯೋಣ” ಎಂದರು. ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಕಾಫು ಅವರು ಲೇಖನ ಯಜ್ಞದ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡಿ, “ಲೇಖನ ಯಜ್ಞವನ್ನು ನಾವೆಲ್ಲರೂ ಮಾಡಬೇಕು. ತಾಯಿ ಎಂದರೆ ಪ್ರಕೃತಿ, ನಾವು ಪ್ರಕೃತಿಯ ಆರಾಧಕರು. ನಾವೆಲ್ಲರೂ ದೇವರನ್ನು ಮತ್ತು ದೇಶವನ್ನು ಆರಾಧನೆ ಮಾಡೋಣ“ ಎಂದರು.
ಕಾಪುಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25ರಿಂದ ಮಾರ್ಚ್ 5ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನವದುರ್ಗ ಲೇಖನ ಯಜ್ಞ ಮತ್ತು ನವ ಚಂಡಿಕಾ ಯಾಗ ನಡೆಸಲು ದೇವಿಯ ಅಭಯವಾಗಿದೆ. 99,999 ಭಕ್ತರು ಈನವದುರ್ಗ ಲೇಖನ ಯಜ್ಞದಲ್ಲಿ ಶ್ರದ್ಧೆ, ಭಕ್ತಿಯಿಂದ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.
ಕಾರ್ಯಕ್ರಮದಲ್ಲಿ ನವದುರ್ಗ ಲೇಖನ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ವಿಶ್ವನಾಥ, ನವದುರ್ಗ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ, ಸಂದೀಪ್ ಕುಮಾರ್ ಮಂಜ, ಎಂ ಬಿ ಪುರಾಣಿಕ್, ರಘುನಾಥ್ ಶೆಟ್ಟಿ ಕೊಪ್ಪಲಂಗಡಿ, ಸುವರ್ತನ್ ಉಡುಪಿ, ಸಂತೋಷ್ ರೈ ಬೋಳಿಯಾರ್, ಪಟ್ಲ ಸತೀಶ್ ಶೆಟ್ಟಿ, ಮಲ್ಲಿಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಮಣೀಶ್ ರೈ, ಅಶ್ವತ್ತಾಮ ಹೆಗ್ಡೆ, ಪ್ರದೀಪ್ ಆಳ್ವ ಕದ್ರಿ, ಸುಲತಾ ಜೆ ರೈ, ಸಂತೋಷ್ ಶೆಟ್ಟಿ ಶೆಡ್ಡೆ, ಅಕ್ಷಿತ್ ಸುವರ್ಣ ಸಹಕರಿಸಿದರು. ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿ ರಚನೆ ಮಾಡಲಾಯಿತು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮನ್ವಿತ್ ಶೆಟ್ಟಿ ಇರಾ ದೇವರನ್ನು ಸ್ತುತಿಸಿದರು. ಕೃಷ್ಣ ಶೆಟ್ಟಿ ತಾರೆಮಾರ್ ಧನ್ಯವಾದ ಸಮರ್ಪಿಸಿದರು.