image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆ ಉದ್ಘಾಟನೆ

ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆ ಉದ್ಘಾಟನೆ

ಮಂಗಳೂರು : 114 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಸೇವೆಯ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ನೂತನ ಶಾಖೆ ಹಾಗೂ ಎಟಿಎಂ ಅನ್ನು ಭಾನುವಾರ ದೇರಳಕಟ್ಟೆಯ ಫಾ. ಮುಲ್ಲರ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿತು. ನೂತನ ಶಾಖೆಯನ್ನು ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಉದ್ಘಾಟಿಸಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ. ಫಾ. ನಿಲೇಶ್ ಕ್ರಾಸ್ತಾ ಎಟಿಎಂ ಸೇವೆಯನ್ನು ಉದ್ಘಾಟಿಸಿದರೆ, ಉರ್ಸುಲಿನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಸೇಫ್ ರೂಂ ಹಾಗೂ ವಂ. ಫಾ. ನೆಲ್ಸನ್ ದೀರಜ್ ಪಾಯ್ಸ್ ಬ್ಯಾಂಕಿನ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿದರು. ಪಾಣೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ನ ಧರ್ಮಗುರು ವಂ. ಫಾ. ವಿಕ್ಟರ್ ಡಿ'ಮೆಲ್ಲೊ ನೂತನ ಶಾಖೆಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಅನಿಲ್ ಲೋಬೊ ಅವರು, ಆರ್‌ಬಿಐ ಮಾರ್ಗಸೂಚಿಗಳ ಅನ್ವಯ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಹಣ ಇಲ್ಲಿ ಸಂಪೂರ್ಣ ಸುರಕ್ಷಿತವಾಗಿದೆ. ಪ್ರಸ್ತುತ ಆಡಳಿತಾವಧಿಯಲ್ಲಿ ಆರಂಭಿಸಲಾದ ಐದು ಶಾಖೆಗಳೂ ಮೊದಲ ವರ್ಷದಲ್ಲೇ ತಲಾ ₹10 ಕೋಟಿ ವ್ಯವಹಾರ ನಡೆಸಿರುವುದು ಗ್ರಾಹಕರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ದೇರಳಕಟ್ಟೆಯ ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಬ್ಯಾಂಕ್ ಇನ್ನಷ್ಟು ಪೂರಕವಾಗಿ ಸ್ಪಂದಿಸಲಿದೆ ಎಂದರು. ಮುಖ್ಯ ಅತಿಥಿ ವಂ. ಸಿ. ಮಿಲ್ಲಿ ಫೆರ್ನಾಂಡಿಸ್ ಹಾಗೂ ಗೌರವ ಅತಿಥಿ ರೆವ. ಫಾ. ನಿಲೇಶ್ ಕ್ರಾಸ್ತಾ ಅವರು ಬ್ಯಾಂಕಿನ ಸೇವಾ ಮನೋಭಾವ ಮತ್ತು ಆರ್ಥಿಕ ಭದ್ರತೆಯ ಯೋಜನೆಗಳನ್ನು ಶ್ಲಾಘಿಸಿ, ಸ್ಥಳೀಯ ಸಮಾಜದ ಸಮಗ್ರ ಅಭಿವೃದ್ಧಿಗೆ ಬ್ಯಾಂಕ್ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದರು. ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಬ್ಯಾಂಕಿನ ಬೆಳವಣಿಗೆಗೆ ಸ್ಥಳೀಯರು ಬೆಂಬಲ ನೀಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಾದ ಫ್ರ್ಯಾಂಕಿ ಫ್ರಾನ್ಸಿಸ್ ಕುಟಿನ್ಹಾ, ಅಲ್ವಿನ್ ಜೆರೋಮ್ ಡಿ'ಸೋಜಾ, ಫಯಾಝ್ ಮಡೂರು, ಸಿಎ ಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ ಹಾಗೂ ಶಫಿ ಬಬ್ಬುಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಮುದಾಯ ಸೇವೆಯ ಭಾಗವಾಗಿ ಉರ್ಸುಲಿನ್ ಸಿಸ್ಟರ್ಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ₹1,00,000, ವಿದ್ಯಾರ್ಥಿನಿ ಪ್ರಿನ್ಸಿತಾ ಡಿ'ಸೋಜಾ ಅವರ ವಿದ್ಯಾಭ್ಯಾಸಕ್ಕೆ ₹25,000, ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್‌ಗೆ ₹50,000 ಹಾಗೂ ಓಲವಿನಹಳ್ಳಿ ಆಶ್ರಮಕ್ಕೆ ₹1,00,000 ಧನಸಹಾಯ ವಿತರಿಸಲಾಯಿತು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ'ಸಿಲ್ವಾ, ಮಹಾಪ್ರಬಂಧಕ ಸುನಿಲ್ ಮೆನೇಜಸ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕ ರೋಶನ್ ಡಿ'ಸೋಜಾ ಸ್ವಾಗತಿಸಿ, ಶೈನಿ ವೀಭಾ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕಿ ಜೂಲಿಯೆಟ್ ಡಿ'ಸೋಜಾ ವಂದಿಸಿದರು.

Category
ಕರಾವಳಿ ತರಂಗಿಣಿ