ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 48ನೇ ವೆಲೆನ್ಸಿಯ ವಾರ್ಡ್‌ನಲ್ಲಿರುವ ರೆಡ್ ಬಿಲ್ಡಿಂಗ್‌ನ ರೋಹನ್ ಕಾರ್ಪೋರೇಷನ್ ಹಿಂಭಾಗದ ರಸ್ತೆಯನ್ನು 20 ಲಕ್ಷ ರೂಪಾಯಿಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಯಂತೆ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ತೊಂದರೆ ಉಂಟಾಗಬಹುದು, ಈ ನಿಟ್ಟಿನಲ್ಲಿ ಸ್ಥಳೀಯರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯ ಸಂದೀಪ್ ಗರೋಡಿ, ಪ್ರಮುಖರಾದ ಪ್ರಕಾಶ್ ಗರೋಡಿ, ಜೇಮ್ಸ್ ಡಿಸೋಜ, ಪ್ರವೀಣ್ ನಿಡ್ಡೆಲ್, ವರುಣ್ ರಾಜ್ ಅಂಬಟ್, ಪದ್ಮನಾಭ, ನಾಗರಾಜ್, ಕೃತಿಕ್ ಉಜ್ಜೋಡಿ, ಮನ್ವಿತ್ ಸೇರಿದಂತೆ ಪರಿಸರದ ನಿವಾಸಿಗಳು ಹಾಗೂ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.