image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು’ ಕವನ ಸಂಕಲನ ಲೋಕಾರ್ಪಣೆ

ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು’ ಕವನ ಸಂಕಲನ ಲೋಕಾರ್ಪಣೆ

ಮೂಡುಬಿದಿರೆ : ಸ್ತ್ರೀ ಎಂಬುದು ಪರಿಪೂರ್ಣತೆಯ ಸಂಕೇತವಾಗಿದ್ದು, ಆಕೆಯ ಅಂತರಂಗದ ಶಕ್ತಿ ಮತ್ತು ಸೃಜನಶೀಲತೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು' ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ಸಂಕಲನದಲ್ಲಿರುವ ಕವನಗಳು ಮೃದುತ್ವ, ಸಂಯಮ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಕೂಡಿವೆ. ಮಹತ್ವಾಕಾಂಕ್ಷೆಯ ಅಂಧ ಓಟಕ್ಕಿಂತ ಬದುಕಿನ ಸರಳತೆ, ಇರುವುದರಲ್ಲಿ ತೃಪ್ತಿ ಹಾಗೂ ಸಂಬಂಧಗಳ ಮೌಲ್ಯವನ್ನು ಇವು ಅತ್ಯಂತ ಸಹಜವಾಗಿ ಅಭಿವ್ಯಕ್ತಿಸಿದ್ದು, ಓದುಗರಲ್ಲಿ ಹೊಸ ಅರಿವು ಮೂಡಿಸುತ್ತವೆ ಎಂದು ಶ್ಲಾಘಿಸಿದರು.

ಕೃತಿ ಪರಿಚಯ ಮಾಡಿದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮಾತನಾಡಿ, ಇಂಗ್ಲಿಷ್ ಶಿಕ್ಷಕಿಯಾಗಿದ್ದರೂ ಸೌಮ್ಯ ಶೆಟ್ಟಿಯವರು ಕನ್ನಡದ ಮೇಲಿನ ಪ್ರೀತಿಯಿಂದ ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವುದು ಪ್ರಶಂಸನೀಯ. ಕವಯಿತ್ರಿ ಮುಂದಿನ ದಿನಗಳಲ್ಲಿ ಪ್ರಾಸದ ಮಿತಿಯನ್ನು ಮೀರಿ ಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸಬೇಕು ಎಂದು ಸಲಹೆ ನೀಡಿದರು. ತಮ್ಮ ಅನಿಸಿಕೆ ಹಂಚಿಕೊಂಡ ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ, ‘ಮಸಿ’ ಕೇವಲ ಕಾಗದದ ಮೇಲಿನ ಗುರುತಲ್ಲ, ಅದು ಹೃದಯದ ಮಾತುಗಳಿಗೆ ಜೀವ ನೀಡುವ ಮಾಧ್ಯಮವಾಗಿದೆ. ನೂರು ಕವನಗಳನ್ನೊಳಗೊಂಡ ಈ ಕೃತಿಯು ಬದುಕಿನ ಅನುಭವ ಹಾಗೂ ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಕುಲಸಚಿವ ಡಾ. ಬಿ. ಪಿ. ಸಂಪತ್ ಕುಮಾರ್ ಮಾತನಾಡಿ, ಈ ಕೃತಿಯಲ್ಲಿ ಸರಳ ಹಾಗೂ ಪರಿಣಾಮಕಾರಿ ಭಾಷೆಯಿದ್ದು, ಕೆಲವು ಕವನಗಳು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳ ಸರಳತೆ ಮತ್ತು ತಾತ್ವಿಕತೆಯನ್ನು ನೆನಪಿಸುತ್ತವೆ ಎಂದರು. ಹವ್ಯಾಸಿ ಬರಹಗಾರ್ತಿ ಆಶಾ ಅಡೂರು ಮಾತನಾಡಿ, ಈ ಸಂಕಲನವು ವೈವಿಧ್ಯಮಯ ಅನುಭವ ನೀಡುವ ‘ಫ್ರೂಟ್ ಸಲಾಡ್’ನಂತಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ