ಮಂಗಳೂರು : ಬಂದರು, ನೌಕಾಯಾನ ಮತ್ತು ಜಲಮಾರ್ಗ ಸಚಿವಾಲಯದ ಕಾರ್ಯದರ್ಶಿಗಳಾದ ಐಎಎಸ್ ಅಧಿಕಾರಿ ಶ್ರೀ ವಿಜಯ್ ಕುಮಾರ್ ಅವರು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿ ಬಂದರಿನ ಕಾರ್ಯಾಚರಣೆಗಳು, ಪ್ರಗತಿಯಲ್ಲಿರುವ ಯೋಜನೆಗಳು ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಿದರು. ಬಂದರಿಗೆ ಆಗಮಿಸಿದ ಅವರನ್ನು ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸುಶೀಲ್ ಕುಮಾರ್ ಸಿಂಗ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಂದರಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ನಂತರ ಕಾರ್ಯದರ್ಶಿಗಳು ಬಂದರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಮುದ್ರ ಕಾರ್ಯಾಚರಣೆಗಳು, ಸರಕು ನಿರ್ವಹಣಾ ಸೌಲಭ್ಯಗಳು, ಗೇಟ್ ಆಟೊಮೇಶನ್ ವ್ಯವಸ್ಥೆ, ಮೂಲಸೌಕರ್ಯ ಹಾಗೂ ವಿಸ್ತರಣಾ ಚಟುವಟಿಕೆಗಳ ಕುರಿತು ಪ್ರತ್ಯಕ್ಷವಾಗಿ ಮಾಹಿತಿ ಪಡೆದುಕೊಂಡರು. ಬಳಿಕ ನಡೆದ ಪರಿಶೀಲನಾ ಸಭೆಯಲ್ಲಿ ಬಂದರಿನ ಕಾರ್ಯಕ್ಷಮತೆ, ಸರಕು ಸಂಚಾರದ ಪ್ರವೃತ್ತಿ, ಮೂಲಸೌಕರ್ಯ ವಿಸ್ತರಣೆ ಯೋಜನೆಗಳು, ಡಿಜಿಟಲ್ ಉಪಕ್ರಮಗಳು ಹಾಗೂ ಭವಿಷ್ಯದ ವ್ಯವಹಾರ ಅಭಿವೃದ್ಧಿ ತಂತ್ರಗಳನ್ನು ಅವಲೋಕಿಸಿದರು. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯದರ್ಶಿಗಳು ನವ ಮಂಗಳೂರು ಬಂದರು ಪ್ರಾಧಿಕಾರವು ಕಾರ್ಯಕ್ಷಮತೆ ಸುಧಾರಣೆ, ಆಟೊಮೇಶನ್ ಹಾಗೂ ಮೂಲಸೌಕರ್ಯ ಆಧಾರಿತ ಅಭಿವೃದ್ಧಿಯ ಮೂಲಕ ಬಂದರಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿರುವುದನ್ನು ಶ್ಲಾಘಿಸಿದರು. ಕರ್ನಾಟಕದ ಒಳನಾಡು ಜಲಮಾರ್ಗಗಳು ಮತ್ತು ಕರಾವಳಿ ಸಾಗಣೆಯನ್ನು ಬಲಪಡಿಸುವ ಮೂಲಕ ಸರಕು ಸಾಗಣೆಯನ್ನು ವೃದ್ಧಿಸುವಂತೆ ಮಾರ್ಗದರ್ಶನ ನೀಡಿದರು. ಗುರುಪುರ ಮತ್ತು ನೇತ್ರಾವತಿ ನದಿಗಳ ಮೂಲಕ ಸರಕು ಸಾಗಣೆಯ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸುವಂತೆ ಸೂಚಿಸಿದರು. ಸಮುದ್ರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉಪಗ್ರಹ ಬಂದರುಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಸಹಕಾರ ಅಗತ್ಯವೆಂದು ತಿಳಿಸಿದರು.
ಕಾರ್ಯದರ್ಶಿಗಳು ಎಂಆರ್ಪಿಎಲ್, ಕೆಐಒಸಿಎಲ್, ಜೆಎಸ್ಡಬ್ಲ್ಯೂ, ಐಒಸಿಎಲ್, ಎಚ್ಪಿಸಿಎಲ್ ಸೇರಿದಂತೆ ಬಂದರು ಬಳಕೆದಾರರು, ಕೈಗಾರಿಕಾ ಪ್ರತಿನಿಧಿಗಳು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಸಂವಾದ ನಡೆಸಿ ಕಾರ್ಯಾಚರಣಾ ದಕ್ಷತೆ ಹೆಚ್ಚಿಸುವುದು, ವ್ಯವಹಾರ ಸುಗಮತೆ ಮತ್ತು ಪಾಲುದಾರರ ಸಹಕಾರ ಬಲಪಡಿಸುವ ಕುರಿತು ಚರ್ಚಿಸಿದರು. ಭೇಟಿಯ ಸಂದರ್ಭದಲ್ಲಿ ಸುಮಾರು ₹105 ಕೋಟಿಗಳ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಹಲವಾರು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಾಯಿತು. ಎಂ.ಡಿ.ಎಲ್ ಯಾರ್ಡ್ ರಸ್ತೆ ಜಾಲ ಯೋಜನೆ, ತಣ್ಣೀರುಭಾವಿ ರಸ್ತೆಯ ಸಮೀಪ ಟ್ರಕ್ ಪಾರ್ಕಿಂಗ್ ಸೌಲಭ್ಯ, ಬೈಕಂಪಾಡಿ ಟ್ರಕ್ ಪಾರ್ಕಿಂಗ್ ಟರ್ಮಿನಲ್ ಮತ್ತು ರಾಷ್ಟ್ರೀಯ ಹೆದ್ದಾರಿ-66 ಅನ್ನು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಯೋಜನೆಗಳನ್ನು ಉದ್ಘಾಟಿಸಲಾಯಿತು. ಬಂದರು ಒಳಘಟ್ಟದ ಮುಚ್ಚಿದ ಗೋದಾಮು ನಿರ್ಮಾಣ ಹಾಗೂ ಪಣಂಬೂರು ಬೀಚ್ ರಸ್ತೆ ಸೌಂದರ್ಯೀಕರಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಇದೇ ವೇಳೆ ಪಣಂಬೂರು ರೈಲು ಯಾರ್ಡ್ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಯೋಜನೆಗೆ ಒಪ್ಪಂದ, ಅಮೃತ್ ಫಾರ್ಮಸಿ ಸೇವೆಯ ಆರಂಭ, ಕಸ್ಟಮ್ಸ್ ಪ್ರದೇಶದಲ್ಲಿ ವಾಹನ ಹಾಗೂ ಸಿಬ್ಬಂದಿ ಪರಿಶೀಲನೆಗಾಗಿ ಮೊಬೈಲ್ ಅಪ್ಲಿಕೇಶನ್ ಪ್ರಾರಂಭ ಸೇರಿದಂತೆ ಹಲವು ಪರಿವರ್ತನಾ ಉಪಕ್ರಮಗಳನ್ನು ಜಾರಿಗೊಳಿಸಲಾಯಿತು. ವಿಶೇಷ ಸಾಮರ್ಥ್ಯ ಹೊಂದಿರುವ ಉದ್ಯೋಗಿಗೆ ಜಾಯ್ಸ್ಟಿಕ್ ನಿಯಂತ್ರಿತ ಎಲೆಕ್ಟ್ರಿಕ್ ವೀಲ್ಚೇರ್ ವಿತರಿಸಲಾಯಿತು. ಈ ಎಲ್ಲಾ ಯೋಜನೆಗಳು ಮತ್ತು ಉಪಕ್ರಮಗಳು ಬಂದರಿನ ಆಧುನೀಕರಣ, ಕಾರ್ಯಕ್ಷಮತೆ, ಸಂಪರ್ಕ ಸುಧಾರಣೆ, ಆರೋಗ್ಯ ಸೇವೆ ಹಾಗೂ ನೌಕರರ ಕಲ್ಯಾಣವನ್ನು ಬಲಪಡಿಸುವುದರ ಜೊತೆಗೆ ಸಮಗ್ರ ಅಭಿವೃದ್ಧಿ ಸಾಧಿಸಲು ನೆರವಾಗಲಿವೆ ಎಂದು ತಿಳಿಸಲಾಗಿದೆ.