image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂತ್ರಪಿಂಡ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ NOTTO ಐತಿಹಾಸಿಕ ಆದೇಶ: ಸಂಸದ ಕ್ಯಾ. ಚೌಟ ಪತ್ರಕ್ಕೆ ಕೇಂದ್ರದ ಸ್ಪಂದನೆ

ಮೂತ್ರಪಿಂಡ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ NOTTO ಐತಿಹಾಸಿಕ ಆದೇಶ: ಸಂಸದ ಕ್ಯಾ. ಚೌಟ ಪತ್ರಕ್ಕೆ ಕೇಂದ್ರದ ಸ್ಪಂದನೆ

ಮಂಗಳೂರು : ದೇಶದಲ್ಲಿ ಮೂತ್ರಪಿಂಡ (ಕಿಡ್ನಿ) ಸೇರಿದಂತೆ ವಿವಿಧ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಮಹತ್ವದ ನಿರ್ಧಾರ ಕೈಗೊಂಡಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಬರೆದಿದ್ದ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ NOTTO, ದೇಶದ ಎಲ್ಲಾ ಅಂಗಾಂಗ ಕಸಿ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯ ಯಶಸ್ಸಿನ ಪ್ರಮಾಣ, ವೈಫಲ್ಯ ಹಾಗೂ ಸಾವಿನ ಪ್ರಮಾಣದ ಸಂಪೂರ್ಣ ಅಂಕಿ-ಅಂಶಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಜೂನ್ 19ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಮಂಗಳೂರಿನ ಪ್ರಮುಖ ನಾಗರಿಕರಾದ ಶ್ಯಾಮ್ ಕಾಮತ್ ಮತ್ತು ಡಾ. ಲಿಯೋನೆಲ್ ಡಿಸೋಜಾ ಅವರು ಸಿದ್ಧಪಡಿಸಿದ್ದ ಸಮಗ್ರ ವರದಿಯನ್ನು ಆಧರಿಸಿ, ಸಂಸದ ಕ್ಯಾ. ಚೌಟ ಅವರು ಕಳೆದ ಮೇ 22ರಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದರು. ಅಂಗಾಂಗ ಕಸಿ ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಶಸ್ತ್ರಚಿಕಿತ್ಸೆಯ ಯಶಸ್ಸು, ಅದರ ನಂತರ ಎದುರಾಗಬಹುದಾದ ದೀರ್ಘಕಾಲಿಕ ಅಡ್ಡಪರಿಣಾಮಗಳು ಹಾಗೂ ಇರುವ ರಿಸ್ಕ್‌ಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಈ ಮಾಹಿತಿ ಕೊರತೆಯನ್ನು ನೀಗಿಸಲು ಎಲ್ಲಾ ಡೇಟಾವನ್ನು ಆಸ್ಪತ್ರೆಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆ ಸೂಚಿಸಲು ಕೋರಿದ್ದರು.

ಇದಕ್ಕೆ ತಕ್ಷಣವೇ ಸ್ಪಂದಿಸಿರುವ NOTTO ನಿರ್ದೇಶಕ ಡಾ. ಅನಿಲ್ ಕುಮಾರ್, ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದಾರೆ. ಇದರ ಪ್ರಕಾರ, ದೇಶಾದ್ಯಂತ NOTTO ಸಂಸ್ಥೆಯೊಂದಿಗೆ ಸಂಯೋಜನೆ ಹೊಂದಿರುವ ಒಟ್ಟು 824 ಅಂಗಕಸಿ ಕೇಂದ್ರಗಳು ತಮ್ಮಲ್ಲಿ ನಡೆಯುವ ಪ್ರತಿಯೊಂದು ಅಂಗಕಸಿ ಚಿಕಿತ್ಸೆಯ ಸಮಗ್ರ ವರದಿ ಹಾಗೂ ಫಾಲೋಅಪ್ ಡೇಟಾವನ್ನು NOTTO ಸಂಸ್ಥೆಗೆ ಕಳುಹಿಸಿಕೊಡಬೇಕಾಗುತ್ತದೆ. ಜೊತೆಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವುದು ಇನ್ನು ಮುಂದೆ ಕಡ್ಡಾಯವಾಗಲಿದೆ. ಈ ಐತಿಹಾಸಿಕ ತೀರ್ಮಾನದಿಂದಾಗಿ ದೇಶದಲ್ಲಿ ಕಿಡ್ನಿ ಕಸಿ ಚಿಕಿತ್ಸಾ ರಂಗದಲ್ಲಿ ಸಾರ್ವಜನಿಕವಾಗಿ ಪಾರದರ್ಶಕತೆ ಹೆಚ್ಚಲಿದ್ದು, ರೋಗಿಗಳು ಮಾಹಿತಿ ಕೊರತೆಯಿಂದ ದೀರ್ಘಕಾಲಿಕ ತೊಂದರೆಗೆ ಒಳಗಾಗುವುದು ತಪ್ಪಲಿದೆ.

Category
ಕರಾವಳಿ ತರಂಗಿಣಿ