ಪುತ್ತೂರು : ಹಿಂದೂಗಳ ಶ್ರದ್ಧಾ ಕೇಂದ್ರ ಹಾಗೂ ಪ್ರಕೃತಿಯ ಮಡಿಲಲ್ಲಿರುವ ಜಿಲ್ಲೆಯ ಹೆಮ್ಮೆಯ ತಾಣವಾದ ಇರ್ದೆಯ ಬೆಂದ್ರ್ ತೀರ್ಥ ಪುಣ್ಯ ಕ್ಷೇತ್ರದ ಉಳಿವು ಮತ್ತು ಸ್ವಚ್ಛತೆಗೆ ಶ್ರಮಿಸುತ್ತಾ ಬಂದಿರುವ ಶಿವಾಜಿ ಯುವಸೇನೆ (ರಿ.) ತನ್ನ ದಶಮಾನೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ 3 ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಸಂಘಟನೆಯು, ಕಾರ್ಯಕರ್ತರ ಅಭಿಪ್ರಾಯದೊಂದಿಗೆ, ಗ್ರಾಮದ ದೇವ-ದೈವಗಳ, ದೇವಾಲಯದ ಆಡಳಿತ ಮಂಡಳಿಯ ಹಾಗೂ ಊರಿನ ಹಿರಿಯರ ಆಶೀರ್ವಾದ ಪಡೆದು 2026ರ ಜನವರಿ 15ರಂದು "ಬೆಂದ್ರ್ ತೀರ್ಥ ಅಭಿವೃದ್ಧಿ ಕಡೆಗೆ ಒಂದು ಸಣ್ಣ ಹೆಜ್ಜೆ" ಎಂಬ ಗುರಿಯೊಂದಿಗೆ ಈ ಬೃಹತ್ ಕಾರ್ಯಕ್ಕೆ ಚಾಲನೆ ನೀಡಿತ್ತು. ಜೂನ್ 25ರಂದು ಈ ಯೋಜನೆಯ ಮೂರೂ ಹಂತದ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ ಎಂದು ಸಂಘಟನೆಯ ಪದಾಧಿಕಾರಿಗಳು ಹೆಮ್ಮೆಯಿಂದ ತಿಳಿಸಿದ್ದಾರೆ.
ಸುಮಾರು 3 ಲಕ್ಷಕ್ಕೂ ಅಧಿಕ ವೆಚ್ಚದ ಈ ಮಹತ್ಕಾರ್ಯವನ್ನು ಸಂಘಟನೆಯು ತನ್ನ ಜವಾಬ್ದಾರಿಯಲ್ಲಿ ವಹಿಸಿಕೊಂಡಿದ್ದರೂ, ಶಾಲಾ ಮಕ್ಕಳಿಂದ ಹಿಡಿದು ಊರಿನ ಹಿರಿಯರವರೆಗಿನ ಎಲ್ಲರ ಮಾರ್ಗದರ್ಶನ, ಹಗಲಿರುಳಿನ ಶ್ರಮ ಮತ್ತು ಸಹಕಾರದಿಂದ ಇಂದು ಬೆಂದ್ರ್ ತೀರ್ಥವು ಅತ್ಯಂತ ಸುಂದರ ಪ್ರವಾಸಿ ಹಾಗೂ ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟು ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಈ ಸುದೀರ್ಘ ಅಭಿವೃದ್ಧಿ ಕಾರ್ಯಕ್ಕೆ ಪುತ್ತೂರಿನ ಶಾಸಕರು ಹಾಗೂ ಸ್ಥಳೀಯ ಯುವ ನಾಯಕರು ಭರವಸೆಯ ಮಾತುಗಳ ಮೂಲಕ ಇನ್ನಷ್ಟು ಸ್ಫೂರ್ತಿ ತುಂಬಿದ್ದಾರೆ. ಈ ಯಜ್ಞದಲ್ಲಿ ಅಳಿಲು ಸೇವೆ ನೀಡಿದ ಪ್ರತಿಯೊಬ್ಬರಿಗೂ ಶಿವಾಜಿ ಯುವಸೇನೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದೆ. ಅಲ್ಲದೆ, ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ ಮಾಡಿಕೊಂಡಿರುವ ಸಂಘಟನೆಯು, ಮುಂದಿನ ದಿನಗಳಲ್ಲೂ ಈ ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ನಾವೆಲ್ಲರೂ ಆದ್ಯತೆ ನೀಡೋಣ, ನಮ್ಮೂರಿನ ಈ ವಿಶೇಷತೆಯನ್ನು ಹತ್ತೂರಿಗೆ ಪಸರಿಸೋಣ ಹಾಗೂ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಎಲ್ಲರೂ ಜೊತೆಯಾಗೋಣ ಎಂದು ಕರೆ ನೀಡಿದೆ.