ಮಂಗಳೂರು: ರಕ್ತಕ್ಕೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ, ರಕ್ತದಾನವೇ ಮಾನವೀಯತೆಯ ಅತ್ಯುನ್ನತ ಸಂಕೇತವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ನಗರದ ರೆಡ್‌ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆ ರಕ್ತದಾನವನ್ನು ಜೀವನದ ಮುಖ್ಯ ಸಂಕಲ್ಪವಾಗಿ ಸ್ವೀಕರಿಸಿದರೆ ಹಲವು ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಶಿವಪ್ರಕಾಶ್ ಡಿ.ಎಸ್. ಮತ್ತು ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 10 ಮತ್ತು ಅದಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಜಿಲ್ಲೆಯ 11 ಮಂದಿ ಸಾಧಕರನ್ನು ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿದ 13 ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು.ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ನಾರಾಯಣ ಕುಂಪಲ (53 ಬಾರಿ), ದೇವಿಪ್ರಸಾದ್ ರಾವ್ (46), ಮಹಮ್ಮದ್ ಮುಸ್ತಾಫ (36), ಎ. ನಿರಂಜನ್ (32), ಫ್ಲಾನ್ಸಿ ಸುವಾರಿಸ್ (27), ಗಣೇಶ್ ನಾಯಕ್ (25), ಅಭಿಷೇಕ್ ಎಚ್.ಎಸ್. (20), ಮಹಮ್ಮದ್ ಅನ್ಸಾರ್ (19), ರಾನ್ಸನ್ ಸ್ಟೀಫನ್ ಕ್ರಾಸ್ತಾ (18), ಅಬ್ದುಲ್ ಮಲಿಕ್ (11) ಮತ್ತು ಸುಧೀರ್ ರಂಜನ್ (10) ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಖಜಾಂಜಿ ಗುರುದತ್ ಎಂ. ನಾಯಕ್, ನಿರ್ದೇಶಕ ರಾಘವೇಂದ್ರ ರಾವ್, ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ವೈದ್ಯಾಧಿಕಾರಿ ಡಾ. ಸುಕೇಶ್ ಮುಂತಾದವರು ಉಪಸ್ಥಿತರಿದ್ದರು. ಪುಷ್ಪರಾಜ್ ಜೈನ್ ಸ್ವಾಗತಿಸಿ, ಪಿ.ಬಿ. ಹರೀಶ್ ರೈ ವಂದಿಸಿದರು, ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.