ಬಂಟ್ವಾಳ : ಕಲ್ಲಡ್ಕ ಪೇಟೆಯ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಿದ್ದ ವಾಹನಗಳನ್ನು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪನಿರೀಕ್ಷಕ ಆದರ್ಶ್ ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿ, ನಿಯಮಬದ್ಧ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿದರು. ವಾಹನಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿದರೆ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೆ, ಇದು ಸರಿಯಾದ ಕ್ರಮವೂ ಅಲ್ಲ. ಆದುದರಿಂದ ರಸ್ತೆಯ ಎಡ ಬದಿಯಲ್ಲಿ ಒಂದೇ ಸಾಲಿನಲ್ಲಿ ನಿಲ್ಲಿಸಿದರೆ, ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದ ಪೊಲೀಸರು ರಸ್ತೆಯ ಬಲ ಬದಿಯಲ್ಲಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳನ್ನು ತೆರವುಗೊಳಿಸಿದರು.
ನಿಯಮಾನುಸಾರ ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ ಮಾಡುವ ಕುರಿತು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು ಅದನ್ನು ಎಲ್ಲರೂ ಪಾಲಿಸಬೇಕು. ಬಲಭಾಗ ವಾಹನ ಸಂಚಾರಕ್ಕೆ ಇರುವ ಕಾರಣ ಅಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ಸಂಚಾರ ನಿಯಮ ಪಾಲನೆಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪನಿರೀಕ್ಷಕ ಆದರ್ಶ್ ಸೂಚಿಸಿದರು. ಇದೇ ವೇಳೆ, ಫ್ಲೈಓವರ್‌ನ ಅಡಿಭಾಗದಲ್ಲಿ ರಿಕ್ಷಾ, ಗೂಡ್ಸ್ ಟೆಂಪೋ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.