ಮಂಗಳೂರು : ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ನಿಯಂತ್ರಿಸಲು ಕೇವಲ ಕಾನೂನು ಕ್ರಮಗಳಿಂದ ಸಾಧ್ಯವಿಲ್ಲ, ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದಾಗ ಮಾತ್ರ ಇದು ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕುಡ್ಮುಲ್ ರಂಗರಾವ್ ಪುರಭವನದಲ್ಲಿ ಯೆನೆಪೋಯ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಳೆದ ಒಂದು ವರ್ಷದಲ್ಲಿ ಮಾದಕ ದ್ರವ್ಯ ಸಂಬಂಧಿತ ಅಪರಾಧಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಸುಮಾರು 400 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಅಲ್ಲದೆ 2,000ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ಗುರುತಿಸಿ ಕೌನ್ಸಿಲಿಂಗ್ ಒಳಪಡಿಸಲಾಗಿದೆ. ಇದರಲ್ಲಿ ಶೇ. 90 ರಷ್ಟು ಜನರಲ್ಲಿ ಸುಧಾರಣೆ ಕಂಡುಬಂದಿದ್ದು, ಕೇವಲ ಶೇ. 10 ರಷ್ಟು ಮಂದಿ ಮಾತ್ರ ಮಾದಕ ದ್ರವ್ಯ ಬಳಕೆಯನ್ನು ಮುಂದುವರಿಸಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡ್ರಗ್ ಪೆಡ್ಲರ್‌ಗಳು ಹಾಗೂ ಸೇವಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಮಾಹಿತಿ ನೀಡಿದವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು. ಈ ವ್ಯವಸ್ಥೆಯ ಮೂಲಕ ವಾರಕ್ಕೆ ಸುಮಾರು 20 ದೂರುಗಳು ಬರುತ್ತಿದ್ದು, ಅದರಲ್ಲಿ 10 ಪ್ರಕರಣಗಳು ದಾಖಲಾಗುತ್ತಿವೆ.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನಿಸಾ, ಮಕ್ಕಳ ಮನಶ್ಶಾಸ್ತ್ರಜ್ಞೆ ಡಾ. ರುಕ್ಸಾನಾ ಹಸನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು. ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ಜಾಗೃತಿ ವಿಡಿಯೋ ಬಿಡುಗಡೆ ಹಾಗೂ ಪ್ಲಕಾರ್ಡ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.