ಧರ್ಮಸ್ಥಳ : ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಸನ್ನಿವೇಶ ನಿವಾರಣೆಯಾಗಿ, ಉತ್ತಮ ಮಳೆ-ಬೆಳೆಯಾಗಲಿ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಅವರ ನಿವಾಸವಾದ ‘ಬೀಡು’ವಿನಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಬಳಿಕ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಮಹತ್ವದ ಮಾತುಕತೆ ನಡೆಸಿ ನೇರವಾಗಿ ಧರ್ಮಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಹಿಂದುಗಳ ರಕ್ಷಣೆ ಮಾಡುವ ಬಿ.ಜೆ.ಪಿ. ನೇತೃತ್ವದ ಜನಪರ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಚುನಾವಣೆಯ ಸಂದರ್ಭದಲ್ಲಿ ನಡೆದ ಅಡ್ಡಮತದಾನದ (ಕ್ರಾಸ್ ವೋಟಿಂಗ್) ಕುರಿತು ಮಾತನಾಡಿದ ವಿಜಯೇಂದ್ರ, ಈ ವಿದ್ಯಮಾನದಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ ಎಂಬುದು ನಿಜ. ತಾವು ಧರ್ಮಸ್ಥಳದ ಪರಮ ಭಕ್ತನಾಗಿದ್ದು, ಮನಸ್ಸಿಗೆ ನೋವಾದಾಗಲೆಲ್ಲ ಇಲ್ಲಿಗೆ ಬಂದು ಶಾಂತಿ ಕಂಡುಕೊಳ್ಳುತ್ತೇನೆ ಎಂದರು. ಈ ಹಿಂದೆ ಅಡ್ಡಮತದಾನದ ಸತ್ಯಾಸತ್ಯತೆ ಹೊರಬರಲು ಧರ್ಮಸ್ಥಳದಲ್ಲೇ ಶಾಸಕಾಂಗ ಸಭೆ ನಡೆಸಬೇಕೆಂದು ತಾವು ಹೇಳಿದ್ದರಾದರೂ, ಪಕ್ಷದ ಹಿರಿಯರು ಮತ್ತು ದೆಹಲಿ ವರಿಷ್ಠರ ಸಲಹೆಯ ಮೇರೆಗೆ ಆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಆಪ್ತತೆ ಮತ್ತು ಒಳ ಒಪ್ಪಂದದ ಕುರಿತು ಕೇಳಿಬರುತ್ತಿರುವ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ ಅವರು, ತಮಗೂ ಮುಖ್ಯಮಂತ್ರಿಗಳಿಗೂ ನಡುವೆ ಯಾವುದೇ ಅಕ್ರಮ ಸಂಬಂಧವಿಲ್ಲ. ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ನೀಡಬೇಕಾದ ಸಾಂವಿಧಾನಿಕ ಗೌರವವನ್ನು ಮಾತ್ರ ತಾವು ನೀಡುತ್ತಿರುವುದಾಗಿ ತಿಳಿಸಿದರು. ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅವರು ನುಡಿದರು.
ರಾಜ್ಯದ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿ.ಜೆ.ಪಿ. ರಾಜ್ಯಾಧ್ಯಕ್ಷರು, ಸದ್ಯದ ಆಡಳಿತದಲ್ಲಿ ಭ್ರಷ್ಟಾಚಾರ, ಅನ್ಯಾಯ ಮತ್ತು ಅವ್ಯವಹಾರಗಳು ಮಿತಿ ಮೀರಿವೆ. ಬಡವರ ವಿರೋಧಿಯಾಗಿರುವ ಈ ಸರ್ಕಾರವನ್ನು ಜನರು ಮುಂಬರುವ ದಿನಗಳಲ್ಲಿ ಬುಡಸಮೇತ ಕಿತ್ತೊಗೆಯಲಿದ್ದಾರೆ ಮತ್ತು ಬಿ.ಜೆ.ಪಿ. ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರು ಸದ್ಯ ಶಾಸಕರೂ ಅಲ್ಲ, ಪಕ್ಷದಲ್ಲೂ ಇಲ್ಲ. ಹೀಗಾಗಿ ಅವರ ಹೇಳಿಕೆಗಳಿಗೆ ತಾವು ಮಹತ್ವ ನೀಡುವುದಿಲ್ಲ ಎಂದು ತಳ್ಳಿಹಾಕಿದರು. ಕಾಂಗ್ರೆಸ್ ಪಕ್ಷವು ಶಾಸಕರಲ್ಲಿ ಗೊಂದಲ ಮೂಡಿಸಲು ಹೆಸರುಗಳನ್ನು ತೇಲಿಬಿಡುತ್ತಿದ್ದು, ಪಕ್ಷಕ್ಕೆ ದ್ರೋಹ ಬಗೆದವರು ಯಾರು ಎಂಬ ನಿಜವಾದ ಸತ್ಯ ಸದ್ಯದಲ್ಲೇ ಹೊರಬರಲಿದೆ. ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇರುವುದರಿಂದ ಈ ಪ್ರಕ್ರಿಯೆ ವೇಗವಾಗಿ ನಡೆಯಲಿದ್ದು, ತಾವು ಎಂದಿಗೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಗೃಹಲಕ್ಷ್ಮಿ ಯೋಜನೆಯಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಸಿ.ಎ.ಜಿ. ವರದಿ ಉಲ್ಲೇಖಿಸಿ ಆರೋಪಿಸಿದ ಅವರು, ಸರ್ಕಾರ ತಕ್ಷಣವೇ ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪಕ್ಷದ ಮುಂದಿನ ನಡೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಇನ್ಮುಂದೆ ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿ.ಜೆ.ಪಿ. ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸುವುದಾಗಿ ಪ್ರಕಟಿಸಿದರು. ಹಿರಿಯ ನಾಯಕರಾದ ಡಿ.ವಿ. ಸದಾನಂದ ಗೌಡ ಹಾಗೂ ಸಿ.ಟಿ. ರವಿ ಅವರನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಭೇಟಿಯಾಗುವುದಾಗಿ ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಗುರುರಾಜ ಗಂಟಿಹೊಳೆ, ಯಶಪಾಲ್ ಸುವರ್ಣ, ರಾಜೇಶ್ ನಾಯಕ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಕೆ. ಪ್ರತಾಪಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಎಲ್ಲರನ್ನೂ ಸ್ವಾಗತಿಸಿದರು.